Thursday, October 23, 2025

ವಲಸೆ

ಮಂಜಿನ ತುಂಡು ಖಂಡಗಳಿಂದ 
ಸೂರ್ಯನ ಬಿಸಿಲ ಪಡೆವೆಡೆಗೆ 
ಖಾಲಿ ಹೊಟ್ಟೆ, ಬರಡು ಬದುಕಿಂದ 
ಊಟ ಉಳಿಯುವಷ್ಟಿರುವೆಡೆಗೆ 
ಬಿಸಿಲು ಕಾದು, ಹೊಟ್ಟೆ ತುಂಬಿದರೆ 
ಮತ್ತೆ ಹಳೆಯ ತಂಪಿಗೆ 
ಪಕ್ಷಿ, ಪ್ರಾಣಿ, ಮೀನುಗಳು ಹೋಗುವುದು 

ಒಂದು ದೇಶದಿಂದ ಇನ್ನೊಂದಕ್ಕಲ್ಲ 

ಬದುಕು ತಟ್ಟೆಯಲ್ಲಿಟ್ಟು ಕೊಟ್ಟ ಊಟವಲ್ಲ 

ಹಸಿವು 
ಊಟದ ದಾರಿ ಹುಡುಕುತ್ತದೆ 
ಛಳಿ 
ಸುರಕ್ಷತೆಯೆಡೆಗೆ ಸಾಗುತ್ತದೆ 
ಸಂತಾನ 
ಜೀವ ತೆರಲೂ ಧೈರ್ಯ ಕೊಡುತ್ತದೆ 

ಗೆರೆಗಳೆಳೆದು ಬಿಟ್ಟಿದ್ದೇವೆ 
ಮನೆ, ಬೀದಿ, ಊರು, ರಾಜ್ಯ, ದೇಶ 
ಬಣ್ಣ, ಭಾಷೆ, ಬಟ್ಟೆ, ಬದುಕು ಬೇರೆಯಾದರೆ 
ನಾವು, ಅವರು, ನಮ್ಮವರು, ಇತರರು 

ಮನುಷ್ಯತ್ವ ಎಂಬ ಪದಕ್ಕೆ 
ಅರ್ಥ ಉಳಿದಿಲ್ಲ 

ಪ್ರಾಣಿತ್ವವನ್ನೇ 
ಗುರುತಿಸೋಣ 
ಅಭ್ಯಸಿಸೋಣ 
ಕಲಿಯೋಣ
ಬಾಳೋಣ 

ಭಾಶೇ