Wednesday, July 24, 2013

ಮುಕ್ತಿ ಚಿಂತನೆ


ಮಣ್ಣಿನ ದೇಹವಿದು, ಮಣ್ಣಿಗೇ ಹೋಗುವುದು
ಅಳುವುದ್ಯಾಕೆ ಇದರ ಗೋಳುಗಳ ಕಟ್ಟಿಕೊಂಡು?
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಕಣ್ಣುಕತ್ತಲೆ ಬರುವಂತೆ ಹೊಟ್ಟೆ ಹಸಿದಿರುವಾಗ, ಬೆತ್ತಲಿರುವಾಗ
ಚಳಿಯಲಿ ನಡುಗುವಾಗ, ಕೈ ಕಾಲು ಸೆಟೆದುಕೊಳ್ಳುವಾಗ
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಪ್ರೀತಿ ಪ್ರೇಮವೆಂದು ಮನಸು ಗೊಂದಲಿಸುವಾಗ
ಕಣ್ಣೀರು, ನಗು, ಕೋಪ, ದ್ವೇಷ, ಜಿಗುಪ್ಸೆ, ಅಹಂಕಾರ, ಅಸೂಯೆಗಳು ಕಾಡಿದಾಗ
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಬಂದು ಬಳಗವು ದುಡ್ಡುಮಾಡಿ ವೈಭವಿಸುವಾಗ
ಇಲ್ಲದ ಸ್ಪರ್ದೆ ಬಂದು ಮನಸ್ಸು ನಕಾರಾತ್ಮಕವಾದಾಗ
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಅಭಾವ ವೈರಾಗ್ಯದ ಸೋರೆ ಬುರುಡೆ ಕಟ್ಟಿಕೊಂಡು
ಸನ್ಯಾಸವೆಂಬ ಬೆಂಕಿ ಬಾವಿಗೆ ಜಿಗಿವ ಬಗ್ಗೆ ಯೋಚಿಸಿ
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಮಣ್ಣಿನದೇ ಆದ ದೇಹದಲಿ, ಹೂವಿನಂತ ಮನಸ ಇಟ್ಟು
ಇಲ್ಲಿ ಕಳಿಸಿ ತೊಂದರೆ ಕೊಟ್ಟ ದೇವರ ಬಗ್ಗೆ ಬಯ್ಯುತಲೇ
ಅವನ ಪಾದ ಸೇರುವುದ ಚಿಂತಿಸಲೇ? ಮುಕ್ತಿಯ ಬಗ್ಗೆ ಚಿಂತಿಸಲೇ?

ಭಾಶೇ

1 comment:

Badarinath Palavalli said...

ಎಲ್ಲ ಹುಟ್ಟುಗಳಿಗಿಲ್ಲ ನೆಮ್ಮದಿ ಬದುಕು. ಅಂತೆಯೇ ಒಳ ಆತ್ಮಕೂ ಗೆಳತಿ.

ಹಸಿದಾಗ ತುತ್ತು ಅನ್ನವಿಕ್ಕದೆ ಪರಿಣಿತರು ಕೂಟರು ಪಾರಾಯಣಕೆ ಎನ್ನುವಂತೆ.

ಚಿಂತನಾರ್ಹ ಕವನ.