Friday, July 4, 2025

ಆಟ

ಮೈದಾ ಹಾಕಿದ್ದು 
ಎಣ್ಣೆಯಲಿ ಕರಿದದ್ದು 
ಸಕ್ಕರೆ ಸುರಿದದ್ದು 
ಬೀದಿ ಬದಿಯದ್ದು 
ಹೊಟ್ಟೆಗೆ ಕೆಟ್ಟದ್ದು 
ಹಣ್ಣು, ತರಕಾರಿ 
ಮನೆಯಲೇ ಮಾಡಿದ್ದು 
ಎಂದು ಆರೋಗ್ಯಕರ ಆಹಾರ ತಿನ್ನುವಾಗ 

ಎದುರಿಗೆ ಬಂದು ನಿಲ್ಲುತ್ತವೆ 
ಹನಿ ಕೇಕು 
ಮಸಾಲಪುರಿ 
ಬರ್ಗರ್ರು 
ಫಿಂಗರ್ ಚಿಪ್ಸು 
ಫಪ್ಸು, ಇತ್ಯಾದಿ, ಇತ್ಯಾದಿ 

ಕಣ್ಣು ನೋಡಿ 
ಮೂಗು ಆಘ್ರಾಣಿಸಿ 
ಬಾಯಿ ಲಾಲಾರಸ ಸೃಜಿಸಿ 
ತಿನ್ನುವ ಸುಖವ ನೆನೆಯುತ್ತಿರೇ 
ಮೇನಕೆಯ ಮುಂದೆ ವಿಶ್ವಾಮಿತ್ರನ ತಪಸ್ಸು 

ಇಂಚಿಂಚಾಗಿ ಕರಗುತ್ತೇನೆ 
ನನ್ನದೇ ನಿರ್ಧಾರಕ್ಕೆ ಮರುಗುತ್ತೇನೆ 
ಹಿಂದೆ ಸರಿಯುತ್ತೇನೆ 
ಕಣ್ಣಲ್ಲೇ ಅನುಭವಿಸುತ್ತೇನೆ 
ಕಡೆಗೆ ಮಣಿದು ಮುಕ್ಕುತ್ತೇನೆ 

ವಾರವಿಡೀ ಅಪರಾಧೀ ಮನೋಭಾವ 
ಚೂರು ಜಾಸ್ತಿ ವಾಕಿಂಗು 
ಕಡಿಮೆ ಈಟಿಂಗು 
ಇಂದ್ರಿಯಗಳ ಕಟ್ಟಿಹಾಕಿ 
ಫಾಸ್ಟಿಂಗು, ಡಯಟಿಂಗು, ಸ್ಲೀಪಿಂಗು 

ವಾರ, ಹದಿನೈದು ದಿನಕ್ಕೊಮ್ಮೆ
ಹೊಸದೊಂದು ಖಯಾಲಿ 
ಮನದಲ್ಲಿ ಖಾಯಿಲೆ 

ಹಿಡಿದಿಟ್ಟಷ್ಟೂ 
ದಿಕ್ಕು ತಪ್ಪುವ ಯೋಚನೆಯೇ 
ಹಿಡಿಯದಿದ್ದರೆ ಹರೋ ಹರ 
ಒಮ್ಮೊಮ್ಮೆ ಲಗಾಮು ಹಾಕಿ 
ಕೆಲವೊಮ್ಮೆ ಕೈಬಿಟ್ಟು 
ಖುಷಿಯಿಂದ ಆಟವಾಡುತ್ತಿದ್ದೇನೆ 
ನನ್ನದೇ ಬದುಕಿನೊಡನೆ 

ಭಾಶೇ

Sunday, June 29, 2025

ಶೋಕ

ಸತ್ತುಹೋಗಿದ್ದ ನೆನೆದು 
ಒಮ್ಮೆ ಅಳಬೇಕಿದೆ, ನೋಡು 
ಕರುಳು ಕಿತ್ತು ಬರುವಂತೆ 

ಬಯಸದೇ ಬಂದದ್ದು 
ಮನಸಿಗೆ ಹಿಡಿಸಿದ್ದು 
ಬಯಸಿ ಪಡೆದದ್ದು

ಉಳಿವುದೆಂದು ಎಣಿಸಿದ್ದು 
ಉಳಿಯಲೆಂದು ಬಯಸಿದ್ದು 
ಉಳಿಸಲು ದಣಿದಿದ್ದು 

ಸತ್ತು ಹೊಯ್ತು 
ಇಲ್ಲದಾಯ್ತು 
ಅಳಿದು ಹೋಯ್ತು 

ಯಾರ ತಬ್ಬಿ ಅಳಲಿ 
ಕಣ್ಣು ಮೂಗು ಒರೆಸುತಾ 
ಹೃದಯ ವಿದ್ರಾವಕವಾಗಿ 

ಅಳಲೇ ಬೇಕಿದೆ 
ಸೂತಕ ಕಳೆವವರೆಗೂ 
ವೈಕುಂಠಕ್ಕೆ ಕಳಿಸುವವರೆಗೂ 

ಅಳದೇ ಭಾರ ಅಳಿಯದು 
ಭಾವ ಅರಳದು 
ಭಾನು ಬೆಳಗದು 

ಸತ್ತುಹೋದ ಹೆಗಲೇ 
ತಲೆಗೆ ಆಧಾರವಾಗಿತ್ತು 
ನೋವಿಗೆ ಮದ್ದಾಗಿತ್ತು 

ಈಗ, ನನ್ನ ನಾನೇ ಅಪ್ಪುತ್ತೇನೆ 
ಕಣ್ಣೀರ ಒರೆಸಿಕೊಳ್ಳುತ್ತೇನೆ 
ಬೆನ್ನ ನಾನೇ ನೀವಿಕೊಳ್ಳುತ್ತೇನೆ 

ಉಸಿರ ಹಿಡಿಯಲಾರೆ 
ಅಳದೇ ಉಳಿಯಲಾರೆ 
ಬದುಕ ಮುಂದೂಡಲಾರೆ 

ಭಾಶೇ

Friday, June 27, 2025

ಕಾಲ


ಭಾವನೆಗಳ ಸೂರ್ಯಾಸ್ತವಾಗಿ 
ಕತ್ತಲಲ್ಲಿ ಕರಗಿಹೋಗುತ್ತಿರುವೆ ನೀನು 
ಕಳೆದುಹೋಗಿರುವೆ ನಾನು 

ಮಾತಾಡಲೇ ಮರೆತುಹೋಗಿದೆ 
ಮೆದುಳು ಗೊಂದಲದ ಗೂಡು 
ತಡಕಾಡುತ್ತಿರುವೆ ಉಸಿರಾಡಲೂ ಕೂಡ 

ಸುನಾಮಿ ಅಪ್ಪಳಿಸುವ ಮೊದಲು 
ಖಾಲಿಯಾದಂತೆ ಸಾಗರದ ಒಡಲು 
ಎದೆ ಬತ್ತಿ,ಗುಳಿತೋರಿ, ಬಂಜರಾದಂತಿದೆ 

ನಿರ್ನಾಮಗೊಳಿಸಲೇ ಬರುವ ಅಲೆ 
ಬಂದು ಎರಗಲಿ ಬಿಡು ನನ್ನೊಳಗೆ 
ಬದುಕಬೇಕಾದ್ದೆಲ್ಲವೂ ಗುಳೆ ಹೋಗಾಗಿದೆ

ಮತ್ತೆ ಸೂರ್ಯೋದಯವಾಗಬಹುದು 
ಹೊಸ ಭಾನು, ಹೊಸ ಭೂಮಿ, ಹೊಸ ನಾನು 
ಅಳಿಸಿಹೋಗಬಹುದು ಈ ನಾಗರೀಕತೆ 

ಪಳೆಯುಳಿಕೆಗಳು ಉಳಿದೇ ಉಳಿದಾವು 
ನೆನಪಲಿ ಕಟ್ಟಿಹಾಕ ಬಯಸುವೆ ನಿನ್ನ 
ಹೊಸ ಯುಗಕ್ಕೆ ನಿನ್ನದೇ ಹೆಸರಿಟ್ಟಿರುವೆ 

ಭಾಶೇ

Friday, June 20, 2025

ಬದಲಾವಣೆ

ಗಾಣದ ಎತ್ತು 
ಸುತ್ತಿದಲ್ಲೇ ಸುತ್ತುತ್ತದೆ 
ಎಣ್ಣೆ ಇಳಿಯುತ್ತದೆ 

ವಾಶಿಂಗ್ ಮಶೀನಿನಲ್ಲಿ 
ಬಟ್ಟೆ ಸುತ್ತುತ್ತದೆ 
ಮುಗಿದಾಗ ಶುಭ್ರವಾಗಿದೆ

ಟ್ರೆಡ್ ಮಿಲ್ ನಲ್ಲಿ 
ನಿಂತಲ್ಲೇ ಓಡಿದರೂ 
ಬೊಜ್ಜು ಕರಗಿದೆ 

ಗೂಡಲ್ಲಿ ಬೇಯುವ ಇಟ್ಟಿಗೆ 
ಬಣ್ಣ ಬದಲು 
ಸ್ವಭಾವವೂ ಬೇರೆ 

ಹರಿವ ನೀರಲಿ ಕಟ್ಟಿದ ಕತ್ತಾಳೆ 
ಕರಗಿ, ಕೊಳೆತು 
ಉಡಿದು ಹಗ್ಗವಾಯ್ತು 

ಶುರುಮಾಡಿದಲ್ಲಿಗೇ ಬಂದೆನೆಂದು 
ನೊಂದು ನೋಡಿದರೆ 
ನಾನೇ ಬದಲಾಗಿದ್ದೇನೆ 

ನನ್ನೊಳಗಿನ ಬದಲಾವಣೆಗಳು 
ನನ್ನರಿವಿಗೇ ಬಾರದಿದ್ದರೆ 
ಹೊರಗಿನವರಿಗೆ ತಿಳಿಯುವುದೇ? 

ಭಾಶೇ

Sunday, June 15, 2025

ಮಗುವಿಗೆ

ನೀ ಬೇಡ ಎಂದ ಮಾತ್ರಕ್ಕೇ 
ಮೋಡ ಚದುರುವುದಿಲ್ಲ 
ಮಳೆ ನಿಲ್ಲುವುದಿಲ್ಲ 
ಸೂರ್ಯ ಹೊಮ್ಮುವುದಿಲ್ಲ 

ನೀನು ನಮ್ಮ ಪ್ರಪಂಚ 
ಪ್ರಪಂಚವೇ ನೀನಲ್ಲ 
ನಾವು ನಿನ್ನ ಗೊಂಬೆಗಳಿರಬಹುದು 
ಇನ್ಯಾರೂ, ಇನ್ಯಾವುದೂ, ಅಲ್ಲ 

ನಿನ್ನ ನಿರ್ಧಾರಗಳು ನಿನ್ನವು 
ಅದರ ಪರಿಣಾಮಗಳೂ ಕೂಡ 
ಒಳಿತಿರಬಹುದೆಂದು ತಿಳಿಹೇಳಬಹುದು 
ನಿನ್ನಷ್ಟೇ ನಮಗೂ ಅರಿವಿಲ್ಲ

ನಾವು ಬಯಸಿ ಪಡೆದ ಮಗು 
ನೆರವೇರದಾಸೆಗಳ ವಾರಸಲ್ಲ 
ನಮ್ಮ ಆಸೆಗಳಿಗೆ ಮಿತಿಯಿಲ್ಲದಿದ್ದರೂ 
ಜೀವಕ್ಕೆ, ಶಕ್ತಿಗೆ, ಬುದ್ದಿಗೆ ಇರಬಹುದಲ್ಲವೇ? 

ಭಾಶೇ

Friday, June 13, 2025

ಸುಡುಗಾಡು

ಈ ಮರುಭೂಮಿ, ನನ್ನದೇ ಸೃಷ್ಟಿ 
ನೀರ ಕಾಲುವೆ ಮಾಡಿ, ಹೊರಗೆ ಹರಿಸಿ 
ಇದ್ದ ಹಸುರಿಗೆ ಬೆಂಕಿ ಕೊಟ್ಟು ಉರಿಸಿ 
ನೆಲದೊಳಗಣ ಬೀಜಕ್ಕೆ ವಿಷ ಬೆರೆಸಿ 
ಕಷ್ಟಪಟ್ಟೇ ಮಾಡಿದ್ದು ಈ ಮರುಭೂಮಿಯ 

ಇಲ್ಲಿ ಕನಸುಗಳು ಹುಟ್ಟುವುದಿಲ್ಲ 

ಹತಾಶೆಯ ಬಿಸಿಗಾಳಿ ಬೀಸುತ್ತದೆ 
ಅನಿವಾರ್ಯತೆಯ ಸೂರ್ಯ ಸುಡುತ್ತಾನೆ 
ಕರ್ತವ್ಯದ ಕಲ್ಲು ಸಿಡಿದು ಕಣ್ಣ ಚುಚ್ಚುವಾಗ 
ಒಂಟಿ ರಕ್ತದ ಹನಿ ಒಸರುತ್ತದೆ 

ದೂರದಿಂದ ಹಾರಿಬರುವ ಹಕ್ಕಿಗಳು 
ಆಕಾಶದಲ್ಲೇ ಕಮರಿ ಕರಕಾಗುತ್ತವೆ 
ಬಿಲದಿಂದ ರಾತ್ರಿ ಆಚೆ ಬಂದ ಇಲಿ 
ಬೆಳಗಾಗುವುದರೊಳಗೆ ಬೆಂದು ಬಲಿ 

ಇದು ನನ್ನದೇ ಸ್ವಂತದ ಸುಡಗಾಡು 
ನಾ ಹೊತ್ತ ಹರಕೆಯ ಫಲ, ಬೇಡಿದ ವರ 
ಹೊನ್ನನಷ್ಟೇ ಹೊರತೆಗೆವ ಆಸೆಯಲಿ 
ಕಡೆಗೆ ಮಣ್ಣನ್ನೂ ಕಳೆದುಕೊಂಡಿದ್ದೇನೆ 

ಭಾಶೇ

Friday, May 30, 2025

ಹುಡುಕಾಟ

ಹುಡುಕಾಟ ನಿಲ್ಲುವುದಿಲ್ಲ 
ಕತ್ತಲೆಯಲ್ಲಿ ಕಳೆದುದಲ್ಲ 
ಬೆಳಕಲ್ಲೇ ಸಿಗಬೇಕೆಂದಿಲ್ಲ 
ಅದೇನೆಂದೂ ಗೊತ್ತಿಲ್ಲ 
ಹುಡುಕಾಟ ಮಾತ್ರ ನಿಲ್ಲುವುದಿಲ್ಲ 

ಏನೋ ಇಲ್ಲವೆಂಬ ಭಾವ 
ಇರಲೇಬೇಕೆಂಬ ವಾದ 
ಇಲ್ಲದೆಯೂ ಪೂರ್ಣತೆಯಿದೆ 
ಇದ್ದೂ ಅಪೂರ್ಣತೆಯಿದೆ 

ನನಗೆ ಬೇಕು, ಅಷ್ಟೇ 
ಪ್ರಪಂಚದ ಗೋಜಿಲ್ಲ 
ಇಂಥದ್ದೇ ಬೇಕೆಂದು 
ನನಗೂ ಗೊತ್ತಿಲ್ಲ 

ಪರಿತಪಿಸುತ್ತಿದ್ದೇನೆ ಕಾತರಳಾಗಿ 
ಉರುಳುವ ಪ್ರತಿ ದಿನವೂ 
ಕೊರಳಿಗೆ ಉರುಳಾಗಿ 
ನಾಳೆಗಳು ಇಂದುಗಳಾಗಿ 

ಸಿಗುವುದೋ, ಇಲ್ಲವೋ 
ಸಿಕ್ಕರೂ ನಾ ಅರಿಯುವೆನೇ? 
ಏನು ಬೇಕೆಂದೇ ಅರಿಯದೆ 
ದೊರೆಯಿತೆಂದು ಹೇಗೆ ಗುರುತುಮಾಡಲಿ? 

ಭಾಶೇ