Thursday, November 12, 2009

ಹೀಗೊಂದು ಬದುಕು

ನಾನು ಬದುಕುತ್ತಿದ್ದೀನಿ ಯಾವುದೊ ಕಥೆಯನ್ನ
ನನ್ನ ನೆನ್ನೆಗಳನ್ನ ನನ್ನ ನಾಳೆಗಳನ್ನ

ಅಮ್ಮ ಹೇಳುತ್ತಿರುತ್ತಾಳೆ, ಹಾಗೆ ನನಗೂ ನೆನಪಿದೆ
ತಟ್ಟೆ ತುಂಬಾ ತುಂಬಿಟ್ಟ ಅಕ್ಕಿ, ರಾಗಿ ಕಾಳಿನಲ್ಲಿ
ಒಂದು ಕಾಳೂ ಹೊರಚೆಲ್ಲದೆ, ಹರವುತ್ತಾ, ಗುಡ್ಡೆ ಮಾಡುತ್ತಾ
ಕೈಯ ಬಳೆಯ ಅದರಲ್ಲಿ ಹುದುಗಿಸಿ, ಮುಚ್ಚಿ, ತೆಗೆದು ಆಡುತ್ತಿದ್ದುದು
ಬೇಸರವೇ ಆಗುತ್ತಿರಲಿಲ್ಲ, ಯಾವಾಗಲು

ಇಂದು, ಒಮ್ಮೊಮ್ಮೆ ನನ್ನೊಳಗೆ ಮಲಗಿರುವ ಮರಿ ಸೌಮ್ಯಳನ್ನು ಎಬ್ಬಿಸುತ್ತೇನೆ
ನನ್ನೊಳಗೆ ನೆನ್ನೆಯ ಜೀವನ ತುಂಬಲು ಪ್ರಯತ್ನಿಸುತ್ತೇನೆ
ನಾಳೆಗಳ ಯೋಚನೆಗಳ, ಭಯಗಳ ಭಾರಕ್ಕೆ
ಎದೆಯಲ್ಲಿ ಎದ್ದು ಕುಳಿತ ಮರಿ ಸೌಮ್ಯ ಮುದುರಿ ಮೂಲೆ ಸೇರುತ್ತಾಳೆ
ಅಳುತ್ತಾ ನಿದ್ದೆ ಹೋಗುತ್ತಾಳೆ, ನೆನ್ನೆಗಳು ಬರೀ ನೆನ್ನೆಗಳಾಗುತ್ತವೆ

ನಾಳೆ ಮಕ್ಕಳ ದಿನಾಚರಣೆ, ಎಲ್ಲ ನೆನ್ನೆಗಳು ನೆನಪಲಿ ಸಾಲುಗಟ್ಟಿವೆ
ಶಾಲೆಯ ಸಂಭ್ರಮ, ಆಚರಣೆಯ ಅಧ್ಯಕ್ಷತೆ,
ಆಟ, ಹಾಡು, ಖುಷಿ, ಬಾಲ್ಯ ಎಷ್ಟಾದರೂ ಬಾಲ್ಯವೇ
ನಾಳೆ ಮತ್ತೆ ಮಕ್ಕಳ ದಿನಾಚರಣೆ, ಅದೆಷ್ಟು ವ್ಯತ್ಯಾಸ
ಬಟ್ಟೆ ಒಗೆವ, ಮನೆ ಗುಡಿಸುವ, ಪಾತ್ರೆ ತೊಳೆವ ಚಿಂತೆ

ನನಗೆ ಗೊತ್ತಿಲ್ಲ, ನಾನು ಯಾರದೋ ಕಥೆಯನ್ನ ಬಾಳುತ್ತಿದ್ದೇನೆ
ನಗುತ್ತಿದ್ದೇನೆ, ಅಳುತ್ತಿದ್ದೇನೆ, ಯಾರದೋ ಸೂಚನೆಗಳಂತೆ
ನನ್ನ ದಿನಗಳು ಯಾವೂ ನನ್ನ ಕೈಗೆ ಸಿಗಲೇ ಇಲ್ಲ, ಬಾಲ್ಯವೂ, ಯವ್ವನವೂ
ಆದರೂ ಇದ್ದೇನೆ, ಗೊಂಬೆಯಂತೆ, ಶವದಂತೆ, ಇಂದಿನ ಬದುಕಿನಂತೆ
ನನ್ನ ನೆನ್ನೆಗಳು ನನ್ನವಾಗಿರಲಿಲ್ಲ, ನನ್ನ ನಾಳೆಗಳು ನನ್ನವಲ್ಲ
ನನ್ನ ಇಂದುಗಳು ಕರಗುವುದು ಅರಿವಿಗೆ ಬರುತ್ತಿಲ್ಲ

ಭಾಶೆ