Wednesday, July 24, 2013

ಮುಕ್ತಿ ಚಿಂತನೆ


ಮಣ್ಣಿನ ದೇಹವಿದು, ಮಣ್ಣಿಗೇ ಹೋಗುವುದು
ಅಳುವುದ್ಯಾಕೆ ಇದರ ಗೋಳುಗಳ ಕಟ್ಟಿಕೊಂಡು?
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಕಣ್ಣುಕತ್ತಲೆ ಬರುವಂತೆ ಹೊಟ್ಟೆ ಹಸಿದಿರುವಾಗ, ಬೆತ್ತಲಿರುವಾಗ
ಚಳಿಯಲಿ ನಡುಗುವಾಗ, ಕೈ ಕಾಲು ಸೆಟೆದುಕೊಳ್ಳುವಾಗ
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಪ್ರೀತಿ ಪ್ರೇಮವೆಂದು ಮನಸು ಗೊಂದಲಿಸುವಾಗ
ಕಣ್ಣೀರು, ನಗು, ಕೋಪ, ದ್ವೇಷ, ಜಿಗುಪ್ಸೆ, ಅಹಂಕಾರ, ಅಸೂಯೆಗಳು ಕಾಡಿದಾಗ
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಬಂದು ಬಳಗವು ದುಡ್ಡುಮಾಡಿ ವೈಭವಿಸುವಾಗ
ಇಲ್ಲದ ಸ್ಪರ್ದೆ ಬಂದು ಮನಸ್ಸು ನಕಾರಾತ್ಮಕವಾದಾಗ
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಅಭಾವ ವೈರಾಗ್ಯದ ಸೋರೆ ಬುರುಡೆ ಕಟ್ಟಿಕೊಂಡು
ಸನ್ಯಾಸವೆಂಬ ಬೆಂಕಿ ಬಾವಿಗೆ ಜಿಗಿವ ಬಗ್ಗೆ ಯೋಚಿಸಿ
ಒಳಗಿರುವ ಆತ್ಮದ ಮುಕ್ತಿಯ ಬಗ್ಗೆ ಚಿಂತಿಸಲೇ?

ಮಣ್ಣಿನದೇ ಆದ ದೇಹದಲಿ, ಹೂವಿನಂತ ಮನಸ ಇಟ್ಟು
ಇಲ್ಲಿ ಕಳಿಸಿ ತೊಂದರೆ ಕೊಟ್ಟ ದೇವರ ಬಗ್ಗೆ ಬಯ್ಯುತಲೇ
ಅವನ ಪಾದ ಸೇರುವುದ ಚಿಂತಿಸಲೇ? ಮುಕ್ತಿಯ ಬಗ್ಗೆ ಚಿಂತಿಸಲೇ?

ಭಾಶೇ

ರೂಪಾಂತರ

ಕಲ್ಲಾದ ನನ್ನೆದೆಯ ಕುಟ್ಟಿ
ಅಡಿಪಾಯ ಕಲ್ಲು, ಜಲ್ಲಿಯಾಗಿಸಿ
ಏನೋ ಸಾಧಿಸಿದೆಯೆಂದು ಮಾಡಿ
ನಿನ್ನ ಮನೆ ಕಟ್ಟಿಕೊಂಡವನೇ

ನುಜ್ಜು ಗೊಜ್ಜಾದ ನನ್ನ ಹೃದಯ
ತಳಪಾಯವಾಗಿ ಛಾವಣಿಯಾಗಿ
ಗಟ್ಟಿ ಸಿಮೆಂಟಿನೊಂದಿಗೆ ಗಟ್ಟಿಯಾಗಿ
ಮತ್ತೂ ಕಲ್ಲಾಗೇ ಉಳಿದಿದೆ

ಹಲವು ಛಿದ್ರ ಚೂರುಗಳಾಗಿ
ಮತ್ತೆ ಒಂದಾಗದಂತೆ ನೊಂದು
ಮಣ್ಣಾಗಿ, ಧೂಳಾಗಿ ಮತ್ತೆ
ನಿನ್ನನೇ ಸುತ್ತಿ ಸುಳಿಯುತಿದೆ

ಕಲ್ಲಾಗೇ ಇದ್ದಿದ್ದರೆ ಈ ನನ್ನ ಹೃದಯ
ನನ್ನಲೇ ಇರುತಿತ್ತು, ಎಂದಾದರೂ ಕರಗುತ್ತಿತ್ತು
ಚೂರು ಚೂರಾಗಿ ಹೋಗಿದೆ ಇಂದು
ಹೃದಯರಹಿತೆ ನಾನು ಕಲ್ಲಾಗೇ ಉಳಿದಿರುವೆ.

ಭಾಶೇ

Friday, July 19, 2013

ತುಂಬಿದೆದೆಗಳ ರಾಕ್ಷಸಿ

ಸಂಜೆಗತ್ತಲಲ್ಲಿ ಗಂಟೆ ಎಂಟಾದ ಮೇಲೆ
ಕೆಲ ಜನನಿಬಿಡ ಕೆಲ ನಿರ್ಜನ ಪ್ರದೇಶದಲ್ಲಿ
ಕಾಣಿಸುತ್ತಾಳೆ ಇವಳು, ತುಂಬಿದೆದೆಗಳ ರಾಕ್ಷಸಿ

ತಿರಸ್ಕಾರ ಭರಿತ ನೋಟ, ಕುಹಕ, ಛೀಕಾರ
ಬದುಕಲು ಇದೇ ದಾರಿಯಾಗಬೇಕ? ಮೂದಲಿಕೆ
ಕೆಲವರಿಗೆ ಕುತೂಹಲದ ವಸ್ತು, ಆಕರ್ಷಣೆ

ಬಣ್ಣದ ಚಿಟ್ಟೆಯಂತೆ ಸಿಂಗರಿಸಿಕೊಂಡು
ಎದೆ ಭಾರವ, ಸ್ತ್ರೀ ನಾಚಿಕೆಯ ಪ್ರದರ್ಶಿಸಿ
ಕಾಯುತ್ತ ನಿಂತಿರುತ್ತಾರೆ, ಲಜ್ಜೆಗೆಟ್ಟು? ಮಾನಗೆಟ್ಟು?

ಯಾರದೋ ಮೊದಲ ಸಲದ ಆಸೆಯ ತೀರಿಸಿ
ಇನ್ಯಾರದೋ ಅತಿ ಕಾಮುಕತೆಯ ನೀಗಿಸಿ
ಬೆಳಗಾಗುವುದರೊಳಗೆ ಮಾಯವಾಗುವ ಮಾಯಿನಿಯರು

ತುಂಬಿದೆದೆಗಳ ಹಿಂದೆ ಅವಿತಿರುವ ಭಾವಗಳೆಷ್ಟು?
ಬಣ್ಣ ಕಳೆದ ಮೇಲೆ ಹರಿವ ಕಣ್ಣೀರ ಕಥೆಯೇನು?
ಯಾವ ತಾಯಿ ಹೆತ್ತ ಮಗಳೋ ಹೀಗೆ ಬಾಳಲು?!

ಅರಿವಿರದ ನಿರ್ಲಜ್ಜೆಯಿಂದ ಮೂದಲಿಸುತ್ತೇವೆ ನಾವು
ಅವರ ಬಾಳಿನ ಪಥವ ನಡೆದವರಷ್ಟೇ ಬಲ್ಲರು
ನಿರ್ಭಾವುಕರೇ ಇವರು? ತುಂಬಿದೆದೆಗಳ ಮಾನಿನಿಯರು?

ಭಾಶೇ