Showing posts with label Kannada Poems. Show all posts
Showing posts with label Kannada Poems. Show all posts

Friday, July 4, 2025

ಆಟ

ಮೈದಾ ಹಾಕಿದ್ದು 
ಎಣ್ಣೆಯಲಿ ಕರಿದದ್ದು 
ಸಕ್ಕರೆ ಸುರಿದದ್ದು 
ಬೀದಿ ಬದಿಯದ್ದು 
ಹೊಟ್ಟೆಗೆ ಕೆಟ್ಟದ್ದು 
ಹಣ್ಣು, ತರಕಾರಿ 
ಮನೆಯಲೇ ಮಾಡಿದ್ದು 
ಎಂದು ಆರೋಗ್ಯಕರ ಆಹಾರ ತಿನ್ನುವಾಗ 

ಎದುರಿಗೆ ಬಂದು ನಿಲ್ಲುತ್ತವೆ 
ಹನಿ ಕೇಕು 
ಮಸಾಲಪುರಿ 
ಬರ್ಗರ್ರು 
ಫಿಂಗರ್ ಚಿಪ್ಸು 
ಫಪ್ಸು, ಇತ್ಯಾದಿ, ಇತ್ಯಾದಿ 

ಕಣ್ಣು ನೋಡಿ 
ಮೂಗು ಆಘ್ರಾಣಿಸಿ 
ಬಾಯಿ ಲಾಲಾರಸ ಸೃಜಿಸಿ 
ತಿನ್ನುವ ಸುಖವ ನೆನೆಯುತ್ತಿರೇ 
ಮೇನಕೆಯ ಮುಂದೆ ವಿಶ್ವಾಮಿತ್ರನ ತಪಸ್ಸು 

ಇಂಚಿಂಚಾಗಿ ಕರಗುತ್ತೇನೆ 
ನನ್ನದೇ ನಿರ್ಧಾರಕ್ಕೆ ಮರುಗುತ್ತೇನೆ 
ಹಿಂದೆ ಸರಿಯುತ್ತೇನೆ 
ಕಣ್ಣಲ್ಲೇ ಅನುಭವಿಸುತ್ತೇನೆ 
ಕಡೆಗೆ ಮಣಿದು ಮುಕ್ಕುತ್ತೇನೆ 

ವಾರವಿಡೀ ಅಪರಾಧೀ ಮನೋಭಾವ 
ಚೂರು ಜಾಸ್ತಿ ವಾಕಿಂಗು 
ಕಡಿಮೆ ಈಟಿಂಗು 
ಇಂದ್ರಿಯಗಳ ಕಟ್ಟಿಹಾಕಿ 
ಫಾಸ್ಟಿಂಗು, ಡಯಟಿಂಗು, ಸ್ಲೀಪಿಂಗು 

ವಾರ, ಹದಿನೈದು ದಿನಕ್ಕೊಮ್ಮೆ
ಹೊಸದೊಂದು ಖಯಾಲಿ 
ಮನದಲ್ಲಿ ಖಾಯಿಲೆ 

ಹಿಡಿದಿಟ್ಟಷ್ಟೂ 
ದಿಕ್ಕು ತಪ್ಪುವ ಯೋಚನೆಯೇ 
ಹಿಡಿಯದಿದ್ದರೆ ಹರೋ ಹರ 
ಒಮ್ಮೊಮ್ಮೆ ಲಗಾಮು ಹಾಕಿ 
ಕೆಲವೊಮ್ಮೆ ಕೈಬಿಟ್ಟು 
ಖುಷಿಯಿಂದ ಆಟವಾಡುತ್ತಿದ್ದೇನೆ 
ನನ್ನದೇ ಬದುಕಿನೊಡನೆ 

ಭಾಶೇ

Sunday, June 29, 2025

ಶೋಕ

ಸತ್ತುಹೋಗಿದ್ದ ನೆನೆದು 
ಒಮ್ಮೆ ಅಳಬೇಕಿದೆ, ನೋಡು 
ಕರುಳು ಕಿತ್ತು ಬರುವಂತೆ 

ಬಯಸದೇ ಬಂದದ್ದು 
ಮನಸಿಗೆ ಹಿಡಿಸಿದ್ದು 
ಬಯಸಿ ಪಡೆದದ್ದು

ಉಳಿವುದೆಂದು ಎಣಿಸಿದ್ದು 
ಉಳಿಯಲೆಂದು ಬಯಸಿದ್ದು 
ಉಳಿಸಲು ದಣಿದಿದ್ದು 

ಸತ್ತು ಹೊಯ್ತು 
ಇಲ್ಲದಾಯ್ತು 
ಅಳಿದು ಹೋಯ್ತು 

ಯಾರ ತಬ್ಬಿ ಅಳಲಿ 
ಕಣ್ಣು ಮೂಗು ಒರೆಸುತಾ 
ಹೃದಯ ವಿದ್ರಾವಕವಾಗಿ 

ಅಳಲೇ ಬೇಕಿದೆ 
ಸೂತಕ ಕಳೆವವರೆಗೂ 
ವೈಕುಂಠಕ್ಕೆ ಕಳಿಸುವವರೆಗೂ 

ಅಳದೇ ಭಾರ ಅಳಿಯದು 
ಭಾವ ಅರಳದು 
ಭಾನು ಬೆಳಗದು 

ಸತ್ತುಹೋದ ಹೆಗಲೇ 
ತಲೆಗೆ ಆಧಾರವಾಗಿತ್ತು 
ನೋವಿಗೆ ಮದ್ದಾಗಿತ್ತು 

ಈಗ, ನನ್ನ ನಾನೇ ಅಪ್ಪುತ್ತೇನೆ 
ಕಣ್ಣೀರ ಒರೆಸಿಕೊಳ್ಳುತ್ತೇನೆ 
ಬೆನ್ನ ನಾನೇ ನೀವಿಕೊಳ್ಳುತ್ತೇನೆ 

ಉಸಿರ ಹಿಡಿಯಲಾರೆ 
ಅಳದೇ ಉಳಿಯಲಾರೆ 
ಬದುಕ ಮುಂದೂಡಲಾರೆ 

ಭಾಶೇ

Friday, June 27, 2025

ಕಾಲ


ಭಾವನೆಗಳ ಸೂರ್ಯಾಸ್ತವಾಗಿ 
ಕತ್ತಲಲ್ಲಿ ಕರಗಿಹೋಗುತ್ತಿರುವೆ ನೀನು 
ಕಳೆದುಹೋಗಿರುವೆ ನಾನು 

ಮಾತಾಡಲೇ ಮರೆತುಹೋಗಿದೆ 
ಮೆದುಳು ಗೊಂದಲದ ಗೂಡು 
ತಡಕಾಡುತ್ತಿರುವೆ ಉಸಿರಾಡಲೂ ಕೂಡ 

ಸುನಾಮಿ ಅಪ್ಪಳಿಸುವ ಮೊದಲು 
ಖಾಲಿಯಾದಂತೆ ಸಾಗರದ ಒಡಲು 
ಎದೆ ಬತ್ತಿ,ಗುಳಿತೋರಿ, ಬಂಜರಾದಂತಿದೆ 

ನಿರ್ನಾಮಗೊಳಿಸಲೇ ಬರುವ ಅಲೆ 
ಬಂದು ಎರಗಲಿ ಬಿಡು ನನ್ನೊಳಗೆ 
ಬದುಕಬೇಕಾದ್ದೆಲ್ಲವೂ ಗುಳೆ ಹೋಗಾಗಿದೆ

ಮತ್ತೆ ಸೂರ್ಯೋದಯವಾಗಬಹುದು 
ಹೊಸ ಭಾನು, ಹೊಸ ಭೂಮಿ, ಹೊಸ ನಾನು 
ಅಳಿಸಿಹೋಗಬಹುದು ಈ ನಾಗರೀಕತೆ 

ಪಳೆಯುಳಿಕೆಗಳು ಉಳಿದೇ ಉಳಿದಾವು 
ನೆನಪಲಿ ಕಟ್ಟಿಹಾಕ ಬಯಸುವೆ ನಿನ್ನ 
ಹೊಸ ಯುಗಕ್ಕೆ ನಿನ್ನದೇ ಹೆಸರಿಟ್ಟಿರುವೆ 

ಭಾಶೇ

Friday, June 20, 2025

ಬದಲಾವಣೆ

ಗಾಣದ ಎತ್ತು 
ಸುತ್ತಿದಲ್ಲೇ ಸುತ್ತುತ್ತದೆ 
ಎಣ್ಣೆ ಇಳಿಯುತ್ತದೆ 

ವಾಶಿಂಗ್ ಮಶೀನಿನಲ್ಲಿ 
ಬಟ್ಟೆ ಸುತ್ತುತ್ತದೆ 
ಮುಗಿದಾಗ ಶುಭ್ರವಾಗಿದೆ

ಟ್ರೆಡ್ ಮಿಲ್ ನಲ್ಲಿ 
ನಿಂತಲ್ಲೇ ಓಡಿದರೂ 
ಬೊಜ್ಜು ಕರಗಿದೆ 

ಗೂಡಲ್ಲಿ ಬೇಯುವ ಇಟ್ಟಿಗೆ 
ಬಣ್ಣ ಬದಲು 
ಸ್ವಭಾವವೂ ಬೇರೆ 

ಹರಿವ ನೀರಲಿ ಕಟ್ಟಿದ ಕತ್ತಾಳೆ 
ಕರಗಿ, ಕೊಳೆತು 
ಉಡಿದು ಹಗ್ಗವಾಯ್ತು 

ಶುರುಮಾಡಿದಲ್ಲಿಗೇ ಬಂದೆನೆಂದು 
ನೊಂದು ನೋಡಿದರೆ 
ನಾನೇ ಬದಲಾಗಿದ್ದೇನೆ 

ನನ್ನೊಳಗಿನ ಬದಲಾವಣೆಗಳು 
ನನ್ನರಿವಿಗೇ ಬಾರದಿದ್ದರೆ 
ಹೊರಗಿನವರಿಗೆ ತಿಳಿಯುವುದೇ? 

ಭಾಶೇ

Sunday, June 15, 2025

ಮಗುವಿಗೆ

ನೀ ಬೇಡ ಎಂದ ಮಾತ್ರಕ್ಕೇ 
ಮೋಡ ಚದುರುವುದಿಲ್ಲ 
ಮಳೆ ನಿಲ್ಲುವುದಿಲ್ಲ 
ಸೂರ್ಯ ಹೊಮ್ಮುವುದಿಲ್ಲ 

ನೀನು ನಮ್ಮ ಪ್ರಪಂಚ 
ಪ್ರಪಂಚವೇ ನೀನಲ್ಲ 
ನಾವು ನಿನ್ನ ಗೊಂಬೆಗಳಿರಬಹುದು 
ಇನ್ಯಾರೂ, ಇನ್ಯಾವುದೂ, ಅಲ್ಲ 

ನಿನ್ನ ನಿರ್ಧಾರಗಳು ನಿನ್ನವು 
ಅದರ ಪರಿಣಾಮಗಳೂ ಕೂಡ 
ಒಳಿತಿರಬಹುದೆಂದು ತಿಳಿಹೇಳಬಹುದು 
ನಿನ್ನಷ್ಟೇ ನಮಗೂ ಅರಿವಿಲ್ಲ

ನಾವು ಬಯಸಿ ಪಡೆದ ಮಗು 
ನೆರವೇರದಾಸೆಗಳ ವಾರಸಲ್ಲ 
ನಮ್ಮ ಆಸೆಗಳಿಗೆ ಮಿತಿಯಿಲ್ಲದಿದ್ದರೂ 
ಜೀವಕ್ಕೆ, ಶಕ್ತಿಗೆ, ಬುದ್ದಿಗೆ ಇರಬಹುದಲ್ಲವೇ? 

ಭಾಶೇ

Friday, June 13, 2025

ಸುಡುಗಾಡು

ಈ ಮರುಭೂಮಿ, ನನ್ನದೇ ಸೃಷ್ಟಿ 
ನೀರ ಕಾಲುವೆ ಮಾಡಿ, ಹೊರಗೆ ಹರಿಸಿ 
ಇದ್ದ ಹಸುರಿಗೆ ಬೆಂಕಿ ಕೊಟ್ಟು ಉರಿಸಿ 
ನೆಲದೊಳಗಣ ಬೀಜಕ್ಕೆ ವಿಷ ಬೆರೆಸಿ 
ಕಷ್ಟಪಟ್ಟೇ ಮಾಡಿದ್ದು ಈ ಮರುಭೂಮಿಯ 

ಇಲ್ಲಿ ಕನಸುಗಳು ಹುಟ್ಟುವುದಿಲ್ಲ 

ಹತಾಶೆಯ ಬಿಸಿಗಾಳಿ ಬೀಸುತ್ತದೆ 
ಅನಿವಾರ್ಯತೆಯ ಸೂರ್ಯ ಸುಡುತ್ತಾನೆ 
ಕರ್ತವ್ಯದ ಕಲ್ಲು ಸಿಡಿದು ಕಣ್ಣ ಚುಚ್ಚುವಾಗ 
ಒಂಟಿ ರಕ್ತದ ಹನಿ ಒಸರುತ್ತದೆ 

ದೂರದಿಂದ ಹಾರಿಬರುವ ಹಕ್ಕಿಗಳು 
ಆಕಾಶದಲ್ಲೇ ಕಮರಿ ಕರಕಾಗುತ್ತವೆ 
ಬಿಲದಿಂದ ರಾತ್ರಿ ಆಚೆ ಬಂದ ಇಲಿ 
ಬೆಳಗಾಗುವುದರೊಳಗೆ ಬೆಂದು ಬಲಿ 

ಇದು ನನ್ನದೇ ಸ್ವಂತದ ಸುಡಗಾಡು 
ನಾ ಹೊತ್ತ ಹರಕೆಯ ಫಲ, ಬೇಡಿದ ವರ 
ಹೊನ್ನನಷ್ಟೇ ಹೊರತೆಗೆವ ಆಸೆಯಲಿ 
ಕಡೆಗೆ ಮಣ್ಣನ್ನೂ ಕಳೆದುಕೊಂಡಿದ್ದೇನೆ 

ಭಾಶೇ

Friday, May 30, 2025

ಹುಡುಕಾಟ

ಹುಡುಕಾಟ ನಿಲ್ಲುವುದಿಲ್ಲ 
ಕತ್ತಲೆಯಲ್ಲಿ ಕಳೆದುದಲ್ಲ 
ಬೆಳಕಲ್ಲೇ ಸಿಗಬೇಕೆಂದಿಲ್ಲ 
ಅದೇನೆಂದೂ ಗೊತ್ತಿಲ್ಲ 
ಹುಡುಕಾಟ ಮಾತ್ರ ನಿಲ್ಲುವುದಿಲ್ಲ 

ಏನೋ ಇಲ್ಲವೆಂಬ ಭಾವ 
ಇರಲೇಬೇಕೆಂಬ ವಾದ 
ಇಲ್ಲದೆಯೂ ಪೂರ್ಣತೆಯಿದೆ 
ಇದ್ದೂ ಅಪೂರ್ಣತೆಯಿದೆ 

ನನಗೆ ಬೇಕು, ಅಷ್ಟೇ 
ಪ್ರಪಂಚದ ಗೋಜಿಲ್ಲ 
ಇಂಥದ್ದೇ ಬೇಕೆಂದು 
ನನಗೂ ಗೊತ್ತಿಲ್ಲ 

ಪರಿತಪಿಸುತ್ತಿದ್ದೇನೆ ಕಾತರಳಾಗಿ 
ಉರುಳುವ ಪ್ರತಿ ದಿನವೂ 
ಕೊರಳಿಗೆ ಉರುಳಾಗಿ 
ನಾಳೆಗಳು ಇಂದುಗಳಾಗಿ 

ಸಿಗುವುದೋ, ಇಲ್ಲವೋ 
ಸಿಕ್ಕರೂ ನಾ ಅರಿಯುವೆನೇ? 
ಏನು ಬೇಕೆಂದೇ ಅರಿಯದೆ 
ದೊರೆಯಿತೆಂದು ಹೇಗೆ ಗುರುತುಮಾಡಲಿ? 

ಭಾಶೇ

Sunday, May 25, 2025

ಅಸ್ಪಷ್ಟ

ಎದೆಯಾಳದಿಂದೆದ್ದು ಬರುವ ನೋವಿಗೆ 
ನಿನ್ನ ಹೆಸರಿಡಲು ಹೆದರುತ್ತೇನೆ 
ಮುಟ್ಟಿದರೆ ಮುರಿದು ಹೋಗುವುದೆಂದು 

ಹಗಲುಗನಸುಗಳ ಗುಡ್ಡೆಹಾಕಿಕೊಳ್ಳುತ್ತೇನೆ 
ಮಿಸುಕಾಡಲಾಗದಷ್ಟು ಬಲವಾಗಿ 
ಕುತ್ತಿಗೆಯಲಿ ಕೂತ ಕರಗದ ಗಂಟು 

ಪ್ರಶ್ನೆಯೂ, ಉತ್ತರವೂ, ನೀನೇ ಆಗುತ್ತೀಯ 
ಕನ್ನಡಿಯ ಪ್ರತಿಫಲನ ಬದಲಾಗಿ 
ಹೊರಳುತ್ತೇನೆ ಹೊಸ ಮಗ್ಗುಲಿಗೆ 

ಅರಿವಿನೊಂದಿಗೇ ಬಾವಿಗಿಳಿದಿದ್ದೇನೆ 
ಕೈ ಚಾಚಲಾಗದಷ್ಟು ಸಣ್ಣ ವೃತ್ತ 
ಒರತೆ ನೀರ ತಂಪು ಸುಡುತ್ತಿದೆ 

ನೀನು ನೀನಷ್ಟೇ ಅಲ್ಲ, ನಿನ್ನಂಥ ಎಲ್ಲರ ಪ್ರತಿಬಿಂಬ 
ನಾನು, ನಾನಷ್ಟೇ, ಹುಚ್ಚು ಕವಿ 
ನೇಯುವ ಕನಸುಗಳಲ್ಲಿ ಭಯವಿಲ್ಲ 

ಹೆಸರು, ಯಶಸ್ಸು, ಹಣ, ರೂಪ, ಯೌವನ 
ಮಾತನಾಡಿಸುವ ಮೊದಲೇ ಮೌಲ್ಯಮಾಪನ 
ಇಡಿ ಇಡಿಯಾಗಿ ಯಾರೂ ಯಾರವರೂ ಅಲ್ಲ  

ಸ್ಪಷ್ಟವಾದ ಶಬ್ದ, ಅರ್ಥಗಳಿಲ್ಲ ನನ್ನೊಳಗೆ 
ನನ್ನ  ನಾನೇ ದಿನಾ ಇನ್ನೂ ಅರಿಯುತ್ತಿರುವುದಾದರೆ 
ನಿನ್ನ ಮುಂದೆ ಏನು ಮಂಡಿಸಲಿ, ಹೇಳು? 

ಭಾಶೇ

Tuesday, May 6, 2025

ಮುಗಿಯಲ್ಲ

ನೀಡಿ ನೀಡಿ ಬರಿದಾದ ಬಾವಿಯಲ್ಲೀಗ ನೀರಿಲ್ಲ 
ಮೇಲ್ಮುಖವಾಗಿದ್ದು ಒಳಮುಖವಾಗಿದೆ 
ಅಂತರಾಳವನ್ನೆಲ್ಲಾ ಬಗೆದು ಶೋಧಿಸಿದೆ 
ನೀರಿಲ್ಲ 

ಆಕಾಶ ತುಂಬಿರುವ ತುಂಟು ಬಿಳಿಮೋಡಗಳಲ್ಲಿ ನೀರಿಲ್ಲ 
ಹಿಂದಿನ ನಿಲ್ದಾಣದಲ್ಲೇ ಸುರಿದಾಗಿದೆ 
ಭಾರ ಕರಗಿ ಮೈ ಹಗುರಾಗಿದೆ 
ನೀರಿಲ್ಲ 

ತೇಲುವ ಮೋಡವ ಕಂಡ ಬಾವಿಗೆ ತಾಳ್ಮೆಯಿಲ್ಲ 
ಮಳೆಯೇ ಬಂತೆಂದು ಖುಷಿಗೊಂಡಿದೆ 
ತಿಳಿನೀರನುಕ್ಕಿಸಲು ಸಜ್ಜಾಗಿದೆ 
ತಾಳ್ಮೆಯಿಲ್ಲ 

ಸುಡು ಸುಡು ಎಂದು ಸುಡುವ ರವಿಗೆ ಕಣ್ಣಿಲ್ಲ 
ನೆಲ ಬಿರುಕಾಗಿ ಒರಟಾಗಿದೆ 
ಬೇರು ಬಳಲಿ ಮೀನು ಗುಳೆಹೋಗಿದೆ 
ಕಣ್ಣಿಲ್ಲ 

ಮೋಡಕ್ಕೆ ಪರಿತಪಿಸಿ ಕಾಯುವ ಬಾವಿಗೆ ಬಾಯಿಲ್ಲ 
ತಂಪಿಲ್ಲದೆ ಒಳಗೇ ಬಿಸಿಯಾಗಿದೆ 
ಕನಸೆಲ್ಲಾ ಹಾಗೇ ಹುಸಿಯಾಗಿದೆ 
ಮುಗಿಯಲ್ಲ 

ಭಾಶೇ

Sunday, May 4, 2025

ಪರಿಮಿತಿ

ಇಷ್ಟು ವಿಶಾಲ ಪ್ರಪಂಚದಲ್ಲಿ 
800,00,00,000 ಜನರ ನಡುವೆ 
ನೀನು ನನಗೆ ಪರಿಚಿತ 
ಲೆಖ್ಖ ಹಾಕು ಸಾಧ್ಯತೆ! 

ನಿನ್ನ ಮೇಲಿನ ಬಯಕೆ ಸತ್ಯ.
ನಿನ್ನ ಕಣ್ಣುಗಳಲ್ಲಿರುವ ಕಾಳಜಿ 
ಮುಗುಳ್ನಗುವಿನ ಸ್ನೇಹ 
ಹೂವಿನಂಥ ಮಾತು 
ಒಳಗೊಳಗೇ ಉರಿವ ಜ್ವಾಲೆ 
ನಾ ಕಟ್ಟಿದ ಕಥೆಯಿರಬಹುದು 

ಮೌನಕ್ಕೂ ಮಾತಿಗೂ ಯುದ್ಧ 
ನಾನು ಮೌನದ ಪರ
ನೀನು ಅಳೆದು ಮಾತಾಡುವವ 
ನಮ್ಮ ನಡುವೆ ಮೈಲಿಗಳ ಅಂತರ 

ಸಂಯಮದೊಂದಿಗೇ ಬದುಕಿಬಿಡಲೇ 
ಆಕರ್ಷಣೆಗಳ ಅಣಬೆಗಳು ಸಾಯಲಿ 
ಆಸೆ ಒಳಗೊಳಗೇ ಸುಟ್ಟುಬಿಡಲಿ 
ಸಂಗಾತಿ ಸತ್ತ ಒಂಟಿ ಹಕ್ಕಿಯಂತೆ 
ಹೇಗೂ ನಗುವಿನ ಪಕಳೆಗಳು ಉದುರುತ್ತಿವೆ 
ಮೈ ಸುಕ್ಕಾಗಿದೆ, ಕೂದಲು ಹಣ್ಣಾಗಿದೆ 

ಬರದಿರುವ ನಾಳೆಗಳ ಹೆಗಲಮೇಲೆ 
ಅನಿಶ್ಚಿತತೆಯ ನಿರ್ಧಾರ ದೂಕುತ್ತೇನೆ 
ತೆರೆದಿಟ್ಟ ಐಸ್ ಕ್ರೀಮಿನಂತೆ ಕರಗುವುದೋ? 
ಕಿತ್ತಿಟ್ಟ ಮೊಗ್ಗಿನಂತೆ ಅರಳುವುದೋ, ಅರಿಯೆ. 

ಭಾಶೇ

Thursday, May 1, 2025

ಯಾರೂ ಅಲ್ಲ

ನಿನ್ನ ಕನಸುಗಳನೇ ಹೆಣೆಯುತ್ತಾ 
ಇರುವಲ್ಲೇ ಕಳೆದುಹೋಗಿರುವಾಗ 
ಬೆಚ್ಚಿ ನನ್ನ ಎಚ್ಚರಿಸಿಕೊಳ್ಳುತ್ತೇನೆ 
ನನಗೆ ನಾನೇ ನೆನಪಿಸಿಕೊಳ್ಳುತ್ತೇನೆ 
ನನ್ನ ಧ್ವನಿಯು ನನ್ನ ಕಿವಿಗೇ 
ಕೇಳುವಂತೆ ಹೇಳಿಕೊಳ್ಳುತ್ತೇನೆ 
ನೀನು ಯಾರೂ ಅಲ್ಲ 

ದುಃಖದ ಕಾರ್ಮೋಡವೊಂದು 
ಗಂಟಲಲ್ಲೇ ಸಿಕ್ಕಿಕೊಂಡಾಗ 
ಆಸೆಗಳ ಗಂಟು ಹುಟ್ಟಿದಾಗ 
ಏನೋ ಸೆಳೆತ ಮರುಕಳಿಸಿದಾಗ 
ಮತ್ತೆ ರಟ್ಟು ಹೊಡೆಯುತ್ತೇನೆ 
ಮುಗಿಯಲು ಇಲ್ಲೇನೂ ಶುರುವಾಗಿಲ್ಲ 
ನೀನು ಯಾರೂ ಅಲ್ಲ 

ನಿನ್ನ ಆರ್ದ ಕಣ್ಣುಗಳಲ್ಲಿ 
ನನ್ನ ಕನಸುಗಳು ಅರಳಲ್ಲ 
ನಿನ್ನ ಸಮ್ಮೋಹಕ ತುಟಿಗಳಲ್ಲಿ 
ನನ್ನ ಹೆಸರಿನ ಜಪವಿಲ್ಲ 
ನಿನಗೆ ನಾನು ನೆನಪಾಗುವುದಿಲ್ಲ 
ನಿನ್ನ ಬದುಕಿನ ಪುಸ್ತಕದಲ್ಲಿ 
ನಾನು ಯಾರೂ ಅಲ್ಲ 

ನನ್ನ ನಿಧಿಯ ನಿನ್ನೆದುರಿಟ್ಟರೆ 
ಆರಿಸಲು ನಿನಗೆ ಆಸಕ್ತಿಯಿಲ್ಲ 
ನಿನಗೆ ಬೇಕಾದ್ದೇನೂ ಇಲ್ಲ 
ನಿನ್ನ ಹಾದಿಯಲಿ ನನ್ನ ನೆರಳಿಲ್ಲ 
ಸಂಧಿಸಿದ ಮಾತ್ರಕ್ಕೆ ಸಂಬಂಧವಿಲ್ಲ 
ತಿರುಗಾಡುವ ದಾರಿಗಳಲ್ಲಿ 
ನಾವಿಬ್ಬರು ಯಾರೂ ಅಲ್ಲ 

ಪಳಗಬೇಕಿದೆ ನಾನಿನ್ನೂ 
ಕ್ಷಣ ಕ್ಷಣಗಳಲ್ಲಿ ಮಾತ್ರ ಬದುಕಿರಲು 
ಒಂದು ಎಳೆಯ ತಂತನ್ನು 
ಹಿಡಿದು ಇನ್ನೊಂದಕ್ಕೆ ಕಟ್ಟದಿರಲು 
ರಸ್ತೆಗಳ ಮರೆತು ಮುಂದುವರೆಯಲು 
ನನ್ನ  ಮಾತ್ರ ಎತ್ತಿ ನಡೆಯಲು 
ಯಾರೂ ಅಲ್ಲದವರನ್ನು ಅಲ್ಲೇ ಬಿಟ್ಟುಬಿಡಲು 

ಭಾಶೇ 


Saturday, April 5, 2025

ನೈವೇದ್ಯ

 ಸ್ನಾನವಿಲ್ಲ 
ಮಡಿ ಬಟ್ಟೆಯಿಲ್ಲ 
ಪೂಜಿಸಲು ಹೂವಿಲ್ಲ 
ಅರ್ಪಿಸಲು ಹಣ್ಣಿಲ್ಲ 
ನೈವೇದ್ಯಕ್ಕೆ ನನ್ನೇ ಇಟ್ಟಿರುವೆ 

ಶುಚಿಯೆಂಬುದು ಒಳಗೂ ಇಲ್ಲ 
ನಾಲಿಗೆಯದೇ ಹಿಡಿತ 
ಕಣ್ಣತುಂಬಾ ಕಾಮನೆಗಳೇ 
ಮನವೋ ಮರ್ಕಟ ಕನಸುಗಾರ 

ಸುಖ ದುಃಖಗಳಲೇ ಮುಳುಗಿ 
ಸರಿ ತಪ್ಪುಗಳಲಿ ಸಿಲುಕಿ 
ಮೌಲ್ಯಗಳ ತೂಗುಯ್ಯಾಲೆಯಾಡಿ 
ದ್ವಂದ್ವಗಳಲೇ ಸಿಲುಕಿದೆ ಮನಸು 

ಅರ್ಪಿಸಬಹುದೇ ಅಪರಿಶುದ್ಧತೆಯನು? 
ಮನಸ ಎಲ್ಲಾ ಯೋಚನೆಗಳನು? 
ದಿನವೂ ಸಾಯುತತಿರುವ ದೇಹವನು? 
ಮರೆತೇ ಹೋಗಿರುವ ಆತ್ಮವನು? 

ಭಾಶೇ

Friday, February 28, 2025

ಮುಟ್ಟು

ನಾನು ಮುಟ್ಟಾಗಿದ್ದೇನೆ 

ಶಾಲೆಯ ಚೀಲ 
ಊಟದ ಬುಟ್ಟಿ 
ಹಾಕಿದ ಬಟ್ಟೆ 
ಹೊಸದಾಗಿ ಒಗೆದು ಒಣಗಲಿ 

ಮುಟ್ಟುವಂತಿಲ್ಲ ನನ್ನನ್ನು  

ಆಫೀಸಿನ ಕುರ್ಚಿ 
ಕಾರಿನ ಸೀಟು 
ದಪ್ಪದ ಜೀನ್ಸು
ಹಾಸಿಗೆಯಲೂ ಉಳಿದ ಕುರುಹು 

ನನಗೆ ಈಗ ಮುಟ್ಟು, ಅಷ್ಟೇ 

ಸ್ನಾನ, ಊಟ, ನಿದ್ರೆ
ಮನಸು, ಮಾತು. ಮೂಡು 
ಬೇಕು, ಸಾಕು, ಬೇಡ 
ಎಲ್ಲದರಲ್ಲೂ ಒಂದಷ್ಟು ಬದಲಾವಣೆ 

ಮುಟ್ಟೊಂದೇ ಕಾಡುವ ಕಾರಣ 

ಅಸಾಮಾನ್ಯವಲ್ಲ, ಅಲಕ್ಷಿಸಲೂ ಸಲ್ಲ 
ಆಯಾಸವಾದರೂ ದಿನ ಬದಲಾಗಲ್ಲ 
ನನ್ನೊಳಗಾಗುವ ಸ್ರಾವಕ್ಕೆ ದನಿಯಿಲ್ಲ 
ನಾನೇ ಮುಟ್ಟಾಗಿದ್ದೇನೆ, ಮುಟ್ಟು ನನಗಲ್ಲ 

ಭಾಶೇ 




Monday, February 17, 2025

piece of meat

ಮಾಂಸದ್ದೊಂದು ತುಂಡು 
ಹಸಿವಿಗೆ ಬೇಲಿಯಿಲ್ಲ 
ನಂಬಿಕೆಗಳು ಬದಲಾದಂತೆ 
ಸರಿ, ತಪ್ಪುಗಳಿಲ್ಲ 

ಕೊಳಲನ್ನಾದರೂ ಊದಬಾರದೇ 
ಮೈಮರೆತು ಬಳಿಸಾರುವಂತೆ 
ದನಿಯೇರಿಸಿ ಹಾಡಬಾರದೇ 
ಹಿಂದ್ಹಿಂದೆ ಓಡಿ ಬರುವಂತೆ 

ಕಲ್ಪನೆಯಲ್ಲಿ ಕಾಲುಜಾರಿದ್ದಾಗಿದೆ 
ನೋವು ಹಿತವಾಗೇ ಇದೆ 
ಮಳೆಯ ನೆನೆದು ಬೆವತಿದ್ದೇನೆ 
ಉಸಿರ ಹಿಡಿದು ಕಾದಿದ್ದೇನೆ 

ನೀಗದ ಆಸೆಗಳ ಭಾರಕ್ಕೆ 
ಕಾಲವೂ ಕುಂಟುತ್ತಿದೆ 
ಎಲ್ಲರಿಗೂ ಒಂದು ವರ್ಷವಾದರೆ 
ನನಗೆ 365 ಒಂಟಿ ರಾತ್ರಿಗಳಾಗಿವೆ 

ಮಾಂಸದ್ದೊಂದು ತುಂಡಷ್ಟೇ 
ಮೆದುಳಿಲ್ಲ, ಮನಸ್ಸಿಲ್ಲ 
ಒಂದೇ ತುಂಡು ಉಳಿದಿದೆ 
ದೇಹ ಕೊಚ್ಚಿ ಛಿದ್ರವಾಗಿದೆ 

ಸಸ್ಯಾಹಾರದ ಪಥ ಹಿಡಿಯಲೇ 
ನಿಟುಕದ ದ್ರಾಕ್ಷಿ ಹುಳಿ 
ಬೇಕು ಬೇಕೆಂದು ಬಯಸಿ 
ಬೇಡೆಂದು ಬಿಡುವುದು ಹೇಗೆ? 

ಭಾಶೇ

Wednesday, October 9, 2024

ಅಂತಿಮ

ಕಂಪಿಸುವ ಭೂಮಿ 
ಕಾಲ ಕೆಳಗೇ ಕುಸಿಯಲಿ 
ಪರ್ವತಗಳು ಬಾಯ್ತೆರೆದು 
ಬೆಂಕಿಯ ನೀರನ್ನೇ ಉಗುಳಲಿ 
ಬಿರುಗಾಳಿ, ಚಂಡಮಾರುತ 
ನನ್ನನ್ನೇ ಹೊತ್ತೊಯ್ಯಲಿ ದೇಶಾಂತರ 
ಭೂಮಿಯ ಆಯಸ್ಕಾಂತವೇ 
ಹಿಮ್ಮುಖವಾಗಿ ಎಳೆದರೂ 
ನಾನು ನಿನ್ನೆಡೆಗೇ ನಡೆಯುತ್ತಿದ್ದೇನೆ 
ನೀನೂ ನನ್ನಡೆಗೇ ಬರುತ್ತಿರುವಿಯೆಂದು 
ನಂಬಿದ್ದೇನೆ 

ನಮ್ಮ ಪ್ರೀತಿಯೇ ನನ್ನ ದಿಕ್ಸೂಚಿ 

ಪ್ರತಿ ದಿನವೂ, ಪ್ರತಿ ಕ್ಷಣವೂ 
ನಿನ್ನ ತಲುಪುವುದೇ ನನ್ನ ಗುರಿ 
ಜೀವನದ ಬಾಗಿಲು ಕಿಟಕಿಗಳೆಲ್ಲಾ 
ನಿನ್ನನೇ ತೋರಿಸುವ ಸಾಧನಗಳು 
ನಾನು ಬೆಳೆಯುತ್ತಲೂ ಇದ್ದೇನೆ 
ಗಳಿಸುತ್ತಲೂ, ಕಳೆಯುತ್ತಲೂ ಇದ್ದೇನೆ 
ನನ್ನೊಳಗಿಂದ ನಾನೇ 
ರೂಪಾಂತರವಾಗುತ್ತಲೂ ಇದ್ದೇನೆ 
ನನ್ನನ್ನು ನನ್ನೆಲ್ಲಾ ರೂಪಗಳೊಂದಿಗೆ 
ಕುರೂಪ, ವಿರೂಪಗಳೊಂದಿಗೆ 
ನೀನು ಪ್ರೀತಿಸುವೆಯೆಂದು 

ಜನ್ಮ ಜನ್ಮಾಂತರಗಳಿಂದಲೂ 
ನಿನ್ನೆಡೆಗೇ ಬರುತ್ತಿದ್ದೇನೆ 
ನನ್ನ ಹೃದಯದ ಬಡಿತವೇ ಸಾಕ್ಷಿ 
ನಿನ್ನ ಅಸ್ತಿತ್ವಕ್ಕೆ 
ನಿನ್ನ ತಲುಪೇ ತಲುಪುತ್ತೇನೆ 
ನನ್ನದೆಲ್ಲವನೂ ಹೊತ್ತು ತರುತ್ತೇನೆ 
ನಿನ್ನ ಪದತಲದಲ್ಲಿ ಹಾಕಲು 
ನಿನ್ನ ಕೂಡುವ ಘಳಿಗೆಯ ನೆನೆದು 
ಅಸಹನೆಯಲಿ ಬೇಯುತ್ತೇನೆ 

ನೀನೂ ನನಗಾಗಿ ಇದೇ ರೀತಿ 
ಚಡಪಡಿಸುತ್ತಿರುವೆಯಾ? 
ನನ್ನಡೆಗೆ ಬರಲು 
ಯುದ್ಧಗಳನೇ ಹೂಡಿರುವೆಯಾ? 
ನಾನು ನಿನ್ನವಳೇ ಎಂದು  ನನ್ನನು 
ನಿನ್ನಡೆಗೇ ಸೆಳೆಯುತ್ತಿರುವೆಯಾ? 
ನನಗಾಗಿ ಕಾಯುತ್ತಿರುವೆಯಾ? 
ಕನಸುತ್ತಿರುವೆಯಾ? 
ಕವಿತೆಗಳ ಬರೆಯುತ್ತಿರುವೆಯಾ? 
ಅಥವಾ ನಿನ್ನ ಬೃಹತ್ ಗಾತ್ರಕ್ಕೆ ನಾನು 
ಅಗೋಚರೀ ತೃಣ ಮಾತ್ರವೇ? 

ಭಾಶೇ 

Sunday, October 6, 2024

ಟ್ರಾಫಿಕ್ ಸಿಗ್ನಲ್ಲು

ದಿನವೂ ಸವೆಯುವ ರಸ್ತೆ 
ಮಾಸದ್ದು ಮುಗುಳ್ನಗು 
ಕೆಂಪುದೀಪದ ಎದುರಷ್ಟೇ 
ಎದುರಾಗುವ ಎರೆಡು ಜೀವಗಳು 

ಬೆಂದಿದ್ದೇನು ಬೆಳಗ್ಗೆ 
ಬೇಯುವುದೇನು ಸಂಜೆ 
ಆರಾಮಿದ್ದೀಯ ತಾನೇ 
ಮುಗಿದೇ ಹೋಯ್ತು ಮಾತು 

ಮೂರು ನಿಮಿಷಗಳಷ್ಟೇ ಪ್ರಾಪ್ತಿ 
ಉಳಿದ ಮಾತುಗಳು ಉಳಿದು 
ನಾಗಾಲೋಟದ ಕುದುರೆ ಹತ್ತಿ 
ಹೊರಟಾಯಿತು ದಾರಿಹಿಡಿದು 

ಟ್ರಾಫಿಕ್ಕಲಿ ಸಿಕ್ಕರೆ ಭೇಟಿ 
ದಿನವೂ ಹುಡುಕುವ ಕಣ್ಣುಗಳು 
ಕಾಣದ ತಂತೊಂದು ಬೆಸೆದಿದೆ 
ಪರಿಚಯವೇ? ಗೆಳೆತನವೇ? ಗೊತ್ತಿಲ್ಲದೇ 

ಭಾಶೇ 

Wednesday, October 2, 2024

ವಾಟ್ಸಾಪ್ ವಿಷ

ದಾನವರಿಗೆ ಅಮೃತ ಸಿಗಲಿಲ್ಲ 
ಕಷ್ಟ ಪಟ್ಟಿದ್ದರು 
ಗಳಿಸಿದ್ದರು 
ದೇವರು ಮೋಸಗಾರ 

ಇಂದಿನ ಮಾನವರಿಗೆ 
ಫೋನಿಗೆ ಬಂದಿದ್ದೆಲ್ಲಾ ಮಾಹಿತಿ 
ಅಭಿಪ್ರಾಯವ ಒಪ್ಪಿದವರೆಲ್ಲಾ 
ಸಹೋದರರು 

ಸುಳ್ಳನ್ನಷ್ಟೇ ಬಿತ್ತಲಾಗುತ್ತಿದೆ 
ವಿಷವನ್ನಷ್ಟೇ ಹರಡಲಾಗುತ್ತಿದೆ 
ಭೇದವನ್ನೇ ಬೆಳೆಸಲಾಗುತ್ತಿದೆ 
ಮೆದುಳನ್ನ ತೊಳೆದಾಗಿದೆ 

ಸುಳ್ಳು ರಂಜಕವಾಗಿದ್ದರೆ 
ಮನಸಿಗೆ ಆಪ್ತವಾದರೆ 
ನಂಬಿಕೆಯ ಧೃಡಗೊಳಿಸಿದರೆ 
ಸತ್ಯವನ್ನಾರು ಹುಡುಕುತ್ತಾರೆ, ನಂಬುತ್ತಾರೆ? 

ಸಾಯುವ ಕಾಲಕ್ಕೆ 
ಶಾಂತಿ ಇರುವುದಿಲ್ಲ 
ಹಣವಂತರು ಹೆಣಗಳ ಮೇಲೆ ಕುಣಿವಾಗ 
ಸಾಯಲು ಸಾಲು ನಿಂತವರು 
ಜಾತಿ, ಧರ್ಮವೆಂದು ಹೊಡೆದಾಡಿದರೆ 
ಲಾಭವ್ಯಾರಿಗೆ, ಹೇಳಿ 

ಭಾಶೇ 

Tuesday, October 1, 2024

ಮಳೆ ಬರುತ್ತಿದೆ

ಅಮ್ಮಾ
ಮಳೆ ಬರುತ್ತಿದೆ 
ಅತ್ತ, ಇತ್ತ ಸುತ್ತಾಡಿ ನೆನೆಯುತ್ತಿದ್ದೇನೆ 
ಛತ್ರಿ ಅಪ್ರಯೋಜಕವಾಗಿದೆ 

ಕಗ್ಗತ್ತಲು 
ನಂದಿ ಹೋದ ದೀಪಗಳು 
ಮಿಂಚುತ್ತಲೂ ಇಲ್ಲ 
ಬರೀ ಧಾರಾಕಾರ ಮಳೆ 
ಮಳೆಯ ದನಿಯೊಂದೇ 

ಹೆಣಗಳಂತೆ ಮಲಗಿದ್ದಾರೆ 
ಕಂಬಳಿ ಹೊದ್ದು 
ಮನೆಗಳೊಳಗಿರುವ ಜನಗಳು 
ಸಂಚಾರ ಸ್ಥಗಿತ 

ನಾನು ಹೊರಗೆನಿಂತು ಮರಗಟ್ಟುತ್ತಿದ್ದೇನೆ 
ನೀನು ಒಳಗೆ ಅಳುತ್ತಿದ್ದೀಯ 
ನಾ ಬಾಗಿಲ ಬಡಿಯಲೊಲ್ಲೆ 
ನೀ ತೆರೆಯಲೊಲ್ಲೆ 
ಬಿಂಕ ಇಬ್ಬರಿಗೂ 
ಮಳೆ ಸುರಿಯುತ್ತಲೇ ಇದೆ 
ನಮ್ಮೊಳಗಿನ ಮಾತುಗಳು 
ನಮಗೇ ಆಹಾರವಾಗಿ ಮುಗಿದುಹೋಗಿವೆ 

ಭಾಶೇ 

Monday, September 30, 2024

ಅಮಾವಾಸ್ಯೆ

ಪ್ರತಿ ಸಂಜೆ ಮುಳುಗುವ ಸೂರ್ಯ 
ಹಲವು ಹಗಲು ಹುಟ್ಟುವುದೇ ಇಲ್ಲ 
ಕತ್ತಲು ಮಬ್ಬಾಗಿ ಹರಿದಿರುತ್ತದೆ 
ಬೆಳಕು ಬಂದಿರುವುದಿಲ್ಲ

ಛಳಿಗಾಲದ ಹಗಲುಗಳಲ್ಲಿ 
ಬಿಸಿನೀರು ಮೈಯ್ಯನೇ ತಾಕುವುದಿಲ್ಲ 
ಮೃಷ್ಟಾನ್ನವನೇ ಬಡಿಸಿಕೊಂಡರೂ 
ಘಮವೂ, ರುಚಿಯೂ, ತಿಳಿಯುವುದಿಲ್ಲ 

ಒಳಗಿನ ಬೆಳಕೆಲ್ಲೋ ಕಳೆದುಹೋಗಿ 
ಆತ್ಮದಿ ಹರಿವೇ ಇರುವುದಿಲ್ಲ 
ಕೈಕಾಲು ತಣ್ಣಗಾಗದಿದ್ದರೂ 
ಹೆಣವೆಂಬ ಭಾವನೆ ಹೋಗುವುದಿಲ್ಲ 

ದೇವರ ಮುಂದಿನ ನಂದಾದೀಪ 
ಕಣ್ಣಲಿ ಬೆಳಕ ತುಂಬುವುದಿಲ್ಲ 
ಹತ್ತಾರು ನಾಳೆಗಳು ಮತ್ತೆ ಕಳೆವವರೆಗೂ 
ಮತ್ತೊಮ್ಮೆ ಸೂರ್ಯ ಉದಯಿಸುವುದಿಲ್ಲ 

ನನ್ನ ಸೂರ್ಯ ಮುಳುಗಿಹೋಗಿರುವುದು 
ವಿಶ್ವಕ್ಕೆಲ್ಲಾ ಕಾಣುವುದಿಲ್ಲ 
ಒಳಗನರಿತ ಕೆಲವರಿಗೆ 
ಏನು ಮಾಡುವುದೆಂದು ತಿಳಿಯುವುದಿಲ್ಲ 

ಭಾಶೇ 

Sunday, September 29, 2024

ವ್ಯಾಪಾರಿ

ಬಾಗಿಲಲಿ ಪೇರಿಸಿಟ್ಟ ತುಂಬು ಚೀಲಗಳು 
ನಾಳೆಯ ಊಟದ ಖಾತರಿ 
ದಿನವಿಡೀ ದಣಿಸುವ ವ್ಯಾಪಾರ 
ಕೊಂಡು, ಮಾರುವ ವ್ಯವಹಾರ 

ಕಾಲ ಕಸುವು ಕದಲುವವರೆಗೂ 
ಕೈಯ ಬಲ ಖಾಲಿಯಾಗುವವರೆಗೂ 
ತಂದ ವಸ್ತುಗಳೆಲ್ಲಾ ಹೋಗಿ 
ಚೀಲ ಮತ್ತೆ ಭರ್ತಿಯಾಗುವವರೆಗೂ

ಮತ್ತೆ ಮನೆಗೆ ಬರುವಷ್ಟರಲ್ಲಿ 
ಪತಂಗಗಳೆಲ್ಲಾ ಪಲಾಯನಗೈದಿರುತ್ತವೆ 
ಕಣ್ಣ ಬೆಳಕು ಮಂದವಾಗಿ 
ಉಸಿರ ತಮಟೆ ತಣ್ಣಗಾಗಿರುತ್ತದೆ 

ಬರಲೇ ಬೇಕಲ್ಲವೇ ಮತ್ತೆ ಮನೆಗೆ 
ಅರೆ ಬರೆ ಬೆಂದ ಅನ್ನಕ್ಕೆ 
ಉಪ್ಪು, ಹುಳಿ, ಖಾರವಿಲ್ಲದ ಸಾರಿಗೆ 
ಹರಿದ ಕಂಬಳಿಗೆ, ಕಾಡುವ ನಿದ್ದೆಗೆ 

ಮನೆಗೆ ತಂದ ಚೀಲಗಳ ತುಂಬಾ 
ಒಡೆದ ಕನಸಿನ ಚೂರುಗಳು 
ಮುರಿದ ಹೃದಯದ ತುಂಡುಗಳು 
ಕಣ್ಣೀರು ಹೀರಿದ ಭಾರದ ಬಟ್ಟೆಗಳು 

ರಾತ್ರಿಯಿಡೀ ಕೈತುಂಬ ಕೆಲಸ 
ಹರಿದುದ ಹೊಲೆದು, ಮುರಿದುದ ಅಂಟಿಸಿ 
ನಾಳೆಗೆ ಮತ್ತೆ ಅದೇ ತಯಾರಿ 
ಎದೆಯೊಳಗೆ ಉಸಿರುತುಂಬುವ ಕೆಲಸ 

ಭಾಶೇ