Tuesday, May 6, 2025

Crush

A sudden sadness falls upon
A dream has been shattered
A crush has run its course
Emptiness sneaks back in 

Riding a high tide
Oblivious to the rock beneath
Sharks are circling around
Painful death is imminent 

Reminiscing those moments 
When dream was a reality 
All seemed possible 
World felt beautiful 

I sink to the bottom
Struggling, still kicking
Water isn't blue anymore 
Slowly turning into fish food

A crush has run its course
Crushing my soul with it
Burning my smile to the ground
Drying up my lifeless eyes 

BhaShe

Sunday, May 4, 2025

ಪರಿಮಿತಿ

ಇಷ್ಟು ವಿಶಾಲ ಪ್ರಪಂಚದಲ್ಲಿ 
800,00,00,000 ಜನರ ನಡುವೆ 
ನೀನು ನನಗೆ ಪರಿಚಿತ 
ಲೆಖ್ಖ ಹಾಕು ಸಾಧ್ಯತೆ! 

ನಿನ್ನ ಮೇಲಿನ ಬಯಕೆ ಸತ್ಯ.
ನಿನ್ನ ಕಣ್ಣುಗಳಲ್ಲಿರುವ ಕಾಳಜಿ 
ಮುಗುಳ್ನಗುವಿನ ಸ್ನೇಹ 
ಹೂವಿನಂಥ ಮಾತು 
ಒಳಗೊಳಗೇ ಉರಿವ ಜ್ವಾಲೆ 
ನಾ ಕಟ್ಟಿದ ಕಥೆಯಿರಬಹುದು 

ಮೌನಕ್ಕೂ ಮಾತಿಗೂ ಯುದ್ಧ 
ನಾನು ಮೌನದ ಪರ
ನೀನು ಅಳೆದು ಮಾತಾಡುವವ 
ನಮ್ಮ ನಡುವೆ ಮೈಲಿಗಳ ಅಂತರ 

ಸಂಯಮದೊಂದಿಗೇ ಬದುಕಿಬಿಡಲೇ 
ಆಕರ್ಷಣೆಗಳ ಅಣಬೆಗಳು ಸಾಯಲಿ 
ಆಸೆ ಒಳಗೊಳಗೇ ಸುಟ್ಟುಬಿಡಲಿ 
ಸಂಗಾತಿ ಸತ್ತ ಒಂಟಿ ಹಕ್ಕಿಯಂತೆ 
ಹೇಗೂ ನಗುವಿನ ಪಕಳೆಗಳು ಉದುರುತ್ತಿವೆ 
ಮೈ ಸುಕ್ಕಾಗಿದೆ, ಕೂದಲು ಹಣ್ಣಾಗಿದೆ 

ಬರದಿರುವ ನಾಳೆಗಳ ಹೆಗಲಮೇಲೆ 
ಅನಿಶ್ಚಿತತೆಯ ನಿರ್ಧಾರ ದೂಕುತ್ತೇನೆ 
ತೆರೆದಿಟ್ಟ ಐಸ್ ಕ್ರೀಮಿನಂತೆ ಕರಗುವುದೋ? 
ಕಿತ್ತಿಟ್ಟ ಮೊಗ್ಗಿನಂತೆ ಅರಳುವುದೋ, ಅರಿಯೆ. 

ಭಾಶೇ

Thursday, May 1, 2025

ಯಾರೂ ಅಲ್ಲ

ನಿನ್ನ ಕನಸುಗಳನೇ ಹೆಣೆಯುತ್ತಾ 
ಇರುವಲ್ಲೇ ಕಳೆದುಹೋಗಿರುವಾಗ 
ಬೆಚ್ಚಿ ನನ್ನ ಎಚ್ಚರಿಸಿಕೊಳ್ಳುತ್ತೇನೆ 
ನನಗೆ ನಾನೇ ನೆನಪಿಸಿಕೊಳ್ಳುತ್ತೇನೆ 
ನನ್ನ ಧ್ವನಿಯು ನನ್ನ ಕಿವಿಗೇ 
ಕೇಳುವಂತೆ ಹೇಳಿಕೊಳ್ಳುತ್ತೇನೆ 
ನೀನು ಯಾರೂ ಅಲ್ಲ 

ದುಃಖದ ಕಾರ್ಮೋಡವೊಂದು 
ಗಂಟಲಲ್ಲೇ ಸಿಕ್ಕಿಕೊಂಡಾಗ 
ಆಸೆಗಳ ಗಂಟು ಹುಟ್ಟಿದಾಗ 
ಏನೋ ಸೆಳೆತ ಮರುಕಳಿಸಿದಾಗ 
ಮತ್ತೆ ರಟ್ಟು ಹೊಡೆಯುತ್ತೇನೆ 
ಮುಗಿಯಲು ಇಲ್ಲೇನೂ ಶುರುವಾಗಿಲ್ಲ 
ನೀನು ಯಾರೂ ಅಲ್ಲ 

ನಿನ್ನ ಆರ್ದ ಕಣ್ಣುಗಳಲ್ಲಿ 
ನನ್ನ ಕನಸುಗಳು ಅರಳಲ್ಲ 
ನಿನ್ನ ಸಮ್ಮೋಹಕ ತುಟಿಗಳಲ್ಲಿ 
ನನ್ನ ಹೆಸರಿನ ಜಪವಿಲ್ಲ 
ನಿನಗೆ ನಾನು ನೆನಪಾಗುವುದಿಲ್ಲ 
ನಿನ್ನ ಬದುಕಿನ ಪುಸ್ತಕದಲ್ಲಿ 
ನಾನು ಯಾರೂ ಅಲ್ಲ 

ನನ್ನ ನಿಧಿಯ ನಿನ್ನೆದುರಿಟ್ಟರೆ 
ಆರಿಸಲು ನಿನಗೆ ಆಸಕ್ತಿಯಿಲ್ಲ 
ನಿನಗೆ ಬೇಕಾದ್ದೇನೂ ಇಲ್ಲ 
ನಿನ್ನ ಹಾದಿಯಲಿ ನನ್ನ ನೆರಳಿಲ್ಲ 
ಸಂಧಿಸಿದ ಮಾತ್ರಕ್ಕೆ ಸಂಬಂಧವಿಲ್ಲ 
ತಿರುಗಾಡುವ ದಾರಿಗಳಲ್ಲಿ 
ನಾವಿಬ್ಬರು ಯಾರೂ ಅಲ್ಲ 

ಪಳಗಬೇಕಿದೆ ನಾನಿನ್ನೂ 
ಕ್ಷಣ ಕ್ಷಣಗಳಲ್ಲಿ ಮಾತ್ರ ಬದುಕಿರಲು 
ಒಂದು ಎಳೆಯ ತಂತನ್ನು 
ಹಿಡಿದು ಇನ್ನೊಂದಕ್ಕೆ ಕಟ್ಟದಿರಲು 
ರಸ್ತೆಗಳ ಮರೆತು ಮುಂದುವರೆಯಲು 
ನನ್ನ  ಮಾತ್ರ ಎತ್ತಿ ನಡೆಯಲು 
ಯಾರೂ ಅಲ್ಲದವರನ್ನು ಅಲ್ಲೇ ಬಿಟ್ಟುಬಿಡಲು 

ಭಾಶೇ 


Saturday, April 5, 2025

ನೈವೇದ್ಯ

 ಸ್ನಾನವಿಲ್ಲ 
ಮಡಿ ಬಟ್ಟೆಯಿಲ್ಲ 
ಪೂಜಿಸಲು ಹೂವಿಲ್ಲ 
ಅರ್ಪಿಸಲು ಹಣ್ಣಿಲ್ಲ 
ನೈವೇದ್ಯಕ್ಕೆ ನನ್ನೇ ಇಟ್ಟಿರುವೆ 

ಶುಚಿಯೆಂಬುದು ಒಳಗೂ ಇಲ್ಲ 
ನಾಲಿಗೆಯದೇ ಹಿಡಿತ 
ಕಣ್ಣತುಂಬಾ ಕಾಮನೆಗಳೇ 
ಮನವೋ ಮರ್ಕಟ ಕನಸುಗಾರ 

ಸುಖ ದುಃಖಗಳಲೇ ಮುಳುಗಿ 
ಸರಿ ತಪ್ಪುಗಳಲಿ ಸಿಲುಕಿ 
ಮೌಲ್ಯಗಳ ತೂಗುಯ್ಯಾಲೆಯಾಡಿ 
ದ್ವಂದ್ವಗಳಲೇ ಸಿಲುಕಿದೆ ಮನಸು 

ಅರ್ಪಿಸಬಹುದೇ ಅಪರಿಶುದ್ಧತೆಯನು? 
ಮನಸ ಎಲ್ಲಾ ಯೋಚನೆಗಳನು? 
ದಿನವೂ ಸಾಯುತತಿರುವ ದೇಹವನು? 
ಮರೆತೇ ಹೋಗಿರುವ ಆತ್ಮವನು? 

ಭಾಶೇ

Friday, February 28, 2025

ಮುಟ್ಟು

ನಾನು ಮುಟ್ಟಾಗಿದ್ದೇನೆ 

ಶಾಲೆಯ ಚೀಲ 
ಊಟದ ಬುಟ್ಟಿ 
ಹಾಕಿದ ಬಟ್ಟೆ 
ಹೊಸದಾಗಿ ಒಗೆದು ಒಣಗಲಿ 

ಮುಟ್ಟುವಂತಿಲ್ಲ ನನ್ನನ್ನು  

ಆಫೀಸಿನ ಕುರ್ಚಿ 
ಕಾರಿನ ಸೀಟು 
ದಪ್ಪದ ಜೀನ್ಸು
ಹಾಸಿಗೆಯಲೂ ಉಳಿದ ಕುರುಹು 

ನನಗೆ ಈಗ ಮುಟ್ಟು, ಅಷ್ಟೇ 

ಸ್ನಾನ, ಊಟ, ನಿದ್ರೆ
ಮನಸು, ಮಾತು. ಮೂಡು 
ಬೇಕು, ಸಾಕು, ಬೇಡ 
ಎಲ್ಲದರಲ್ಲೂ ಒಂದಷ್ಟು ಬದಲಾವಣೆ 

ಮುಟ್ಟೊಂದೇ ಕಾಡುವ ಕಾರಣ 

ಅಸಾಮಾನ್ಯವಲ್ಲ, ಅಲಕ್ಷಿಸಲೂ ಸಲ್ಲ 
ಆಯಾಸವಾದರೂ ದಿನ ಬದಲಾಗಲ್ಲ 
ನನ್ನೊಳಗಾಗುವ ಸ್ರಾವಕ್ಕೆ ದನಿಯಿಲ್ಲ 
ನಾನೇ ಮುಟ್ಟಾಗಿದ್ದೇನೆ, ಮುಟ್ಟು ನನಗಲ್ಲ 

ಭಾಶೇ 




Monday, February 17, 2025

piece of meat

ಮಾಂಸದ್ದೊಂದು ತುಂಡು 
ಹಸಿವಿಗೆ ಬೇಲಿಯಿಲ್ಲ 
ನಂಬಿಕೆಗಳು ಬದಲಾದಂತೆ 
ಸರಿ, ತಪ್ಪುಗಳಿಲ್ಲ 

ಕೊಳಲನ್ನಾದರೂ ಊದಬಾರದೇ 
ಮೈಮರೆತು ಬಳಿಸಾರುವಂತೆ 
ದನಿಯೇರಿಸಿ ಹಾಡಬಾರದೇ 
ಹಿಂದ್ಹಿಂದೆ ಓಡಿ ಬರುವಂತೆ 

ಕಲ್ಪನೆಯಲ್ಲಿ ಕಾಲುಜಾರಿದ್ದಾಗಿದೆ 
ನೋವು ಹಿತವಾಗೇ ಇದೆ 
ಮಳೆಯ ನೆನೆದು ಬೆವತಿದ್ದೇನೆ 
ಉಸಿರ ಹಿಡಿದು ಕಾದಿದ್ದೇನೆ 

ನೀಗದ ಆಸೆಗಳ ಭಾರಕ್ಕೆ 
ಕಾಲವೂ ಕುಂಟುತ್ತಿದೆ 
ಎಲ್ಲರಿಗೂ ಒಂದು ವರ್ಷವಾದರೆ 
ನನಗೆ 365 ಒಂಟಿ ರಾತ್ರಿಗಳಾಗಿವೆ 

ಮಾಂಸದ್ದೊಂದು ತುಂಡಷ್ಟೇ 
ಮೆದುಳಿಲ್ಲ, ಮನಸ್ಸಿಲ್ಲ 
ಒಂದೇ ತುಂಡು ಉಳಿದಿದೆ 
ದೇಹ ಕೊಚ್ಚಿ ಛಿದ್ರವಾಗಿದೆ 

ಸಸ್ಯಾಹಾರದ ಪಥ ಹಿಡಿಯಲೇ 
ನಿಟುಕದ ದ್ರಾಕ್ಷಿ ಹುಳಿ 
ಬೇಕು ಬೇಕೆಂದು ಬಯಸಿ 
ಬೇಡೆಂದು ಬಿಡುವುದು ಹೇಗೆ? 

ಭಾಶೇ

Sunday, January 19, 2025

Sunday Rain

It rains every sunday 

Like clock work 
Clouds gather 
Conversations 
Tears roll down 
It rains every Sunday

Sun or storm
Spring or fall 
Day and night
Midnight to midnight
It rains every Sunday

You can't run away
Sahara or Antarctica 
Everywhere
On the whole planet 
It rains every Sunday

It dreads a tough Monday 
Misses a casual Saturday
Can't wait for a Wednesday
Reasons, needles to say! 
It rains every Sunday 

BhaShe