Wednesday, August 24, 2016

ಕಮಲ

ಮೊಗ್ಗಾಗಿದ್ದೆ
ಅರಳುವವಳಿದ್ದೆ
ನೀವು ಹೇಳುವಂತೆ ಬಲಿತಿದ್ದೆ

ಅರಳುವ ಮೊದಲೇ
ತಾಯಿ ಬೇರಿಂದ
ಹೂಗಾರನ ಬುಟ್ಟಿಸೇರಿದ್ದೆ

ನಿಮ್ಮ ಪೂಜೆ
ನಿಮ್ಮ ನೆಮ್ಮದಿ
ನನ್ನ ಖಂಡಾಂತರ ಪ್ರಯಾಣ

ದೊಡ್ಡ ಪೂಜಾರಿಯ
ಒರಟು ಕೈಗಳಲ್ಲಿ
ನನ್ನ ಕನಸುಗಳ ಅವಸಾನ

ಹೊರ ಪಕಳೆಗಳ ಕಿತ್ತು
ಒಳಗಿನದನ ಬಿಡಿಸಿ
ಬಲವಂತದಿ ನನ್ನ ಹೂವಾಗಿಸಿ

ಮಂತ್ರಘೋಷ
ಭಕ್ತಿ ಭಾವದಿಂದ
ಹಿಡಿದೆನ್ನ ದೇವರ ಮೇಲೇರಿಸಿ

ಮರುದಿನಕ್ಕೆ ನಾನು
ಕಸವಾಗುವ ನಿರ್ಮಾಲ್ಯ
ನಿಮಗಿನ್ನು ನನ್ನ ಚಿಂತೆಯಿಲ್ಲ

ನಾ ಹುಟ್ಟಿದಾ ಕೆರೆಗೇ
ನಾನೀಗ ಮಾಲಿನ್ಯ
ಒಳಗುಳಿದ ಬದುಕಿನ್ನೂ ಸತ್ತಿಲ್ಲ

ಭಾಶೆ

1 comment:

ಮನಸಿನಮನೆಯವನು said...

ಇಚ್ಛೆಯಿಲ್ಲದೆ ಪರರಿಗೆ ಬಳಕೆಯಾಗಿ ಮರುಗಿದ ಬಾಳು ತುಂಬಾ ಚೆನ್ನಾಗಿ ಮೂಡಿಬಂದಿದೆ