Friday, April 28, 2017

ಮುಗಿಯದ ಮಾತು

ಭೇಟಿ, ಒಳತೋಟಿ ತೆರೆದು
ಗುಡ್ಡೆ ಹಾಕಿದ್ದ ನೆನಪುಗಳ ಹರಡಿ
ಎಷ್ಟು ಹೇಳಿದರೂ ಮುಗಿಯದೆ
ಮುಂದಿನ ಭೇಟಿಗಷ್ಟು ಉಳಿಸಿ
ಮಾತುಗಳು ಮುಗಿಯುತ್ತಿದ್ದವು

ತೀರ ಅನಿವಾರ್ಯವಾದರೊಂದು ದೂರವಾಣಿ ಕರೆ
ಅಷ್ಟು ಮಾತು, ಮತ್ತೆ ತೆರೆ
ಹೇಳದೆ ಉಳಿದ ಮಾತುಗಳಿದ್ದವು
ಅದಕಷ್ಟು ಬೆಲೆಯಿತ್ತು
ಮಾತು ಉಳಿದರೂ ಮಾತು ಮುಗಿಯುತ್ತಿತ್ತು

ಚಾಟ್ ರೂಮಿನ ಬಾಗಿಲ ಹಿಂದೆ
ಬೇರೆಯದೇ ವಿಶ್ವ ತೆರೆದರೂ
ಅದಕೂ ಇತಿ ಮಿತಿ ಇತ್ತು
ಬಾಗಿಲಾಚೆ ಬೇರೆ ಲೋಕವಿತ್ತು
ಮಾತುಗಳು ಮುಗಿಯುತ್ತಿದ್ದವು

ಅಂತರ್ಜಾಲ ಕೈಯಲ್ಲಿ ಹಿಡಿದು
ಸಮಯ, ದೂರಗಳ ಎಲ್ಲೆ ಮೀರಿ
ಬೇಕು ಬೇಡದವರೆಲ್ಲಾ ಬದುಕಿಗಿಣಕುವಾಗ
ಸಂಬಂದಗಳ ಗೆರೆ ಮಸುಕಾದಾಗ
ಮಾತುಗಳು ಮುಗಿಯುವುದಿಲ್ಲ

ಇಂದು ಮಾತುಗಳು ಮುಗಿಯುವುದಿಲ್ಲ
ಎರೆಡರ ಮಧ್ಯರಾತ್ರಿಯಲಿ ಗಿಣಿಗುಟ್ಟುವ ಫೋನು
ವಾಟ್ಸಾಪು, ಫೇಸ್ಬುಕ್ಕಿನಲಿ ಬರುವ ಮಾತು
ದಿನ, ವಾರ, ವರ್ಷಗಟ್ಟಲೆ ಆಡಿದರೂ
ಇಂದು ಮಾತುಗಳು ಮುಗಿಯುವುದಿಲ್ಲ

ಭಾಶೇ

No comments: