Friday, February 28, 2025

ಮುಟ್ಟು

ನಾನು ಮುಟ್ಟಾಗಿದ್ದೇನೆ 

ಶಾಲೆಯ ಚೀಲ 
ಊಟದ ಬುಟ್ಟಿ 
ಹಾಕಿದ ಬಟ್ಟೆ 
ಹೊಸದಾಗಿ ಒಗೆದು ಒಣಗಲಿ 

ಮುಟ್ಟುವಂತಿಲ್ಲ ನನ್ನನ್ನು  

ಆಫೀಸಿನ ಕುರ್ಚಿ 
ಕಾರಿನ ಸೀಟು 
ದಪ್ಪದ ಜೀನ್ಸು
ಹಾಸಿಗೆಯಲೂ ಉಳಿದ ಕುರುಹು 

ನನಗೆ ಈಗ ಮುಟ್ಟು, ಅಷ್ಟೇ 

ಸ್ನಾನ, ಊಟ, ನಿದ್ರೆ
ಮನಸು, ಮಾತು. ಮೂಡು 
ಬೇಕು, ಸಾಕು, ಬೇಡ 
ಎಲ್ಲದರಲ್ಲೂ ಒಂದಷ್ಟು ಬದಲಾವಣೆ 

ಮುಟ್ಟೊಂದೇ ಕಾಡುವ ಕಾರಣ 

ಅಸಾಮಾನ್ಯವಲ್ಲ, ಅಲಕ್ಷಿಸಲೂ ಸಲ್ಲ 
ಆಯಾಸವಾದರೂ ದಿನ ಬದಲಾಗಲ್ಲ 
ನನ್ನೊಳಗಾಗುವ ಸ್ರಾವಕ್ಕೆ ದನಿಯಿಲ್ಲ 
ನಾನೇ ಮುಟ್ಟಾಗಿದ್ದೇನೆ, ಮುಟ್ಟು ನನಗಲ್ಲ 

ಭಾಶೇ 




Monday, February 17, 2025

piece of meat

ಮಾಂಸದ್ದೊಂದು ತುಂಡು 
ಹಸಿವಿಗೆ ಬೇಲಿಯಿಲ್ಲ 
ನಂಬಿಕೆಗಳು ಬದಲಾದಂತೆ 
ಸರಿ, ತಪ್ಪುಗಳಿಲ್ಲ 

ಕೊಳಲನ್ನಾದರೂ ಊದಬಾರದೇ 
ಮೈಮರೆತು ಬಳಿಸಾರುವಂತೆ 
ದನಿಯೇರಿಸಿ ಹಾಡಬಾರದೇ 
ಹಿಂದ್ಹಿಂದೆ ಓಡಿ ಬರುವಂತೆ 

ಕಲ್ಪನೆಯಲ್ಲಿ ಕಾಲುಜಾರಿದ್ದಾಗಿದೆ 
ನೋವು ಹಿತವಾಗೇ ಇದೆ 
ಮಳೆಯ ನೆನೆದು ಬೆವತಿದ್ದೇನೆ 
ಉಸಿರ ಹಿಡಿದು ಕಾದಿದ್ದೇನೆ 

ನೀಗದ ಆಸೆಗಳ ಭಾರಕ್ಕೆ 
ಕಾಲವೂ ಕುಂಟುತ್ತಿದೆ 
ಎಲ್ಲರಿಗೂ ಒಂದು ವರ್ಷವಾದರೆ 
ನನಗೆ 365 ಒಂಟಿ ರಾತ್ರಿಗಳಾಗಿವೆ 

ಮಾಂಸದ್ದೊಂದು ತುಂಡಷ್ಟೇ 
ಮೆದುಳಿಲ್ಲ, ಮನಸ್ಸಿಲ್ಲ 
ಒಂದೇ ತುಂಡು ಉಳಿದಿದೆ 
ದೇಹ ಕೊಚ್ಚಿ ಛಿದ್ರವಾಗಿದೆ 

ಸಸ್ಯಾಹಾರದ ಪಥ ಹಿಡಿಯಲೇ 
ನಿಟುಕದ ದ್ರಾಕ್ಷಿ ಹುಳಿ 
ಬೇಕು ಬೇಕೆಂದು ಬಯಸಿ 
ಬೇಡೆಂದು ಬಿಡುವುದು ಹೇಗೆ? 

ಭಾಶೇ