ಶಾಲೆಯ ಚೀಲ
ಊಟದ ಬುಟ್ಟಿ
ಹಾಕಿದ ಬಟ್ಟೆ
ಹೊಸದಾಗಿ ಒಗೆದು ಒಣಗಲಿ
ಮುಟ್ಟುವಂತಿಲ್ಲ ನನ್ನನ್ನು
ಆಫೀಸಿನ ಕುರ್ಚಿ
ಕಾರಿನ ಸೀಟು
ದಪ್ಪದ ಜೀನ್ಸು
ಹಾಸಿಗೆಯಲೂ ಉಳಿದ ಕುರುಹು
ನನಗೆ ಈಗ ಮುಟ್ಟು, ಅಷ್ಟೇ
ಸ್ನಾನ, ಊಟ, ನಿದ್ರೆ
ಮನಸು, ಮಾತು. ಮೂಡು
ಬೇಕು, ಸಾಕು, ಬೇಡ
ಎಲ್ಲದರಲ್ಲೂ ಒಂದಷ್ಟು ಬದಲಾವಣೆ
ಮುಟ್ಟೊಂದೇ ಕಾಡುವ ಕಾರಣ
ಅಸಾಮಾನ್ಯವಲ್ಲ, ಅಲಕ್ಷಿಸಲೂ ಸಲ್ಲ
ಆಯಾಸವಾದರೂ ದಿನ ಬದಲಾಗಲ್ಲ
ನನ್ನೊಳಗಾಗುವ ಸ್ರಾವಕ್ಕೆ ದನಿಯಿಲ್ಲ
ನಾನೇ ಮುಟ್ಟಾಗಿದ್ದೇನೆ, ಮುಟ್ಟು ನನಗಲ್ಲ
ಭಾಶೇ
No comments:
Post a Comment