ಬಡ ಮೊಮ್ಮಕ್ಕಳುಗಳು
ವಾಯುವಿಹಾರ ಮಾಡಿಸುತ್ತಾರೆ
ಶ್ರೀಮಂತ ಮಕ್ಕಳನ್ನು
ಬಡ ಅಮ್ಮಂದಿರು
ದಿನವಿಡೀ ಸಾಕುತ್ತಾರೆ
ಬಡ ಅಜ್ಜ, ಅಜ್ಜಿಯರು
ಒಪ್ಪತ್ತಿನ ಅನ್ನಕ್ಕಾಗಿ
ಇನ್ನೂ ದುಡಿಯುತ್ತಾರೆ
ಬಡ ಮಕ್ಕಳುಗಳು
ಒಟ್ಟೊಟ್ಟಿಗೆ ಕೂತು
ಅಪ್ಪ, ಅಮ್ಮರ ಕಾಯುತ್ತಾರೆ
ಅರಮನೆಯಿದೆಯೆಂದರೆ
ಕೈ, ಕಾಲಿಗೆ ಮಾಡಿಕೊಡಲು
ಸೇವಾವರ್ಗವೂ ಇರಲೇಬೇಕಲ್ಲವೇ?
ಪಕ್ವಾನ್ನಗಳನ್ನು ಮಾಡುವ
ಉಣಬಡಿಸುವ, ತೊಳೆಯುವ
ಹೊಟ್ಟೆಗಳೂ ಹಸಿದಿರಬೇಕಲ್ಲವೇ?
ಕೈಯೆತ್ತಿ ಕೊಟ್ಟಿದ್ದೆಲ್ಲವೂ
ಪುಣ್ಯ ತರುವ ದಾನವಲ್ಲದಿದ್ದರೆ
ಪಾಪ ತೊಳೆವ ಸಾಬೂನು
ಹರಿದು ಬಂದ ದೌರ್ಜನ್ಯದ
ಇನ್ನೊಂದು ಮುಖವಲ್ಲವೇನು
ತಲೆತಲಾಂತರದ ಆಸ್ತಿಯು?
ಭಾಶೇ