Friday, February 19, 2010

ಹಕ್ಕಿಯ ಮರಣ

ಹಕ್ಕಿಯೊಂದು ಆಗಸದಿಂದ ಬಿದ್ದು ಸತ್ತು ಹೋಯಿತು
ಅದು ಕೊಲೆಯೋ? ಆತ್ಮಹತ್ಯೆಯೋ?
ಭಯದ ನೆರಳು ಉಳಿದೆಲ್ಲ ಹಕ್ಕಿಗಳ ಕವಿದಿತ್ತು

ಅದನ್ಯಾರು ಅದನ್ಯಾಕೆ ಕೊಲ್ಲುವವರು?
ಪಂಜು, ಬಾಣ, ಗುಂಡುಗಳ ಗುರುತಿಲ್ಲ ಅದು ಶಿಕಾರಿಯಲ್ಲ
ವಿಮಾನ ತಾಗುವಷ್ಟು ಎತ್ತರದಿ ಅದು ಹಾರುವುದಿಲ್ಲ
ಅದರ ಕೊಲೆ ನಿಜಕ್ಕೂ ಆಯಿತಾ? ಕೌತುಕ

ಅದು ಆತ್ಮ ಹತ್ಯೆಯಾ? ಅದೇಕೆ ಸಾಯಬಯಸುವುದು?
ಅದಕ್ಕೊಂದು ಗೂಡಿತ್ತು, ಬಾಳ ಸಂಗಾತಿಯಿತ್ತು
ಹತ್ತು ಮಕ್ಕಳು ಹುಟ್ಟಿ ಹಾರಿ ಹೋಗಿದ್ದವು
ಹೊಟ್ಟೆಯ ಬಯಕೆಗಳ ತೀರಿಸಲು ಬರವಿರಲಿಲ್ಲ
ಮೈಯಲ್ಲಿ ಕಸುವಿತ್ತು, ಪರಿಸರ ಸೊಂಪಾಗಿತ್ತು
ಅದು ಆತ್ಮಹತ್ಯೆಯು ಅಲ್ಲವೆನಿಸಿತ್ತು

ಮರಣೋತ್ತರ ಪರೀಕ್ಷೆಯ ಫಲಿತಾಂಶ ಹಕ್ಕಿಗಳ ಭಯವನ್ನು ಇನ್ನಷ್ಟು ಹೆಚ್ಚಿಸಿತು
ಅದು ಕೊಲೆಯು ಅಲ್ಲ ಆತ್ಮಹತ್ಯೆಯು ಅಲ್ಲ
ಅದು ಮರಣ, ಸಹಜ ಮರಣ, ಕೇವಲ ಹಟಾತ್ ಮರಣ
ಬದುಕಿ ಬಾಳಬಹುದಾದ ಯಾರನ್ನೂ ಹೊತ್ತೊಯ್ಯ ಬಹುದಾದ ಸಾವು
ನಾಳೆಗಳಿಗಿದ್ದ ಆಯಸ್ಸನ್ನು ಇಂದೇ ಮುಗಿಸುವ ನೋವು

ಆ ಹಕ್ಕಿಯ ಸಾವು ಬರಿ ಸಾವಷ್ಟೇ ಆಗಿತ್ತು
ಆ ಸಾವಿಗೆ ಕಾರಣವಿರಲಿಲ್ಲ, ಸೃಷ್ಟಿಕರ್ತನಿರಲಿಲ್ಲ
ಸಾವು ಸುಮ್ಮನೆ ಬಂದು ಆ ಜೀವವ ಹೊತ್ತೊಯ್ಯಿತು

ಹಾರಾಡುವ ಹಕ್ಕಿಗಳ ರೆಕ್ಕೆ ಕಡಿದು ತುಂಡರಿಸಿದಂತೆ ಅನಿಸಿತ್ತು
ಯಾರು ಹೇಳುವವರು ಇದು ಅನ್ಯಾಯದ ಸಾವು
ಆದರೆ ಸಾವಿಗೂ ಸತ್ತ ಹಕ್ಕಿಗೂ ಅದ್ಯಾವುದೂ ತಿಳಿದಿರಲಿಲ್ಲ

ಯಾರು ಸತ್ತರೇನು, ಹಾರಾಡುವುದ ಬಿಡಲಾರವು ಹಕ್ಕಿಗಳು
ಯಾರು ಅತ್ತರೇನು, ಪ್ರಾಣ ಹರಣವ ಬಿಡಲಾರದು ಸಾವು

ಆಗಸದಿಂದ ಸುಮ್ಮನೆ ಹಾಗೇ ಉದುರತೊಡಗಿದವು ಹಕ್ಕಿಗಳು
ಭುವಿಗೆ ಬಿದ್ದ ಹಕ್ಕಿ ದೇಹದಿಂದ ಹಾರಿದವು ಪ್ರಾಣಗಳು
ಒಂದು ಕಾಲವೇ ಮುಗಿಯುವಂತೆ, ಒಂದು ಜೈವಿಕ ವಿನಾಶದಂತೆ
ಬರಡಾದವು ಆಕಾಶ, ಮರಗಳು, ಹಕ್ಕಿ ಗೂಡುಗಳು
ಮತ್ತು ಅವೆಲ್ಲವುಗಳ ಸೃಷ್ಟಿ ಕರ್ತ ಕೂಡ
ಏನೆಲ್ಲ ನಿಂತುಹೋಯಿತು ಎಂಬುದರ ಅರಿವು ಯಾರಿಗೂ ಇಲ್ಲ
ಏಕೆಂದರೆ ಎಲ್ಲರೂ ಎಲ್ಲವೂ ನಿಂತು ಹೋಗಿತ್ತು
ಮತ್ತು ಅಲ್ಲಿಗೆ ಅದೊಂದು ಮುಕ್ತಾಯದ, ಪೂರ್ಣ ವಿರಾಮದ
ಅಂತ್ಯದ ಮತ್ತು ಹೊಸ ಆರಂಭದ ಗುರುತಾಗಿತ್ತು

ಭಾಶೇ

6 comments:

ದಿನಕರ ಮೊಗೇರ said...

tumbaa chennaagide kavana........ namma sutta muttala aaguttiruva badalaavanegalannu namage gurutisale aaguttilla.... ee kavanada ee saalugalu tumbaa chennaagive,.......ಬದುಕಿ ಬಾಳಬಹುದಾದ ಯಾರನ್ನೂ ಹೊತ್ತೊಯ್ಯ ಬಹುದಾದ ಸಾವು
ನಾಳೆಗಳಿಗಿದ್ದ ಆಯಸ್ಸನ್ನು ಇಂದೇ ಮುಗಿಸುವ ನೋವು

ಕನಸು said...

ಹಾಯ್ ರಿ
ನಿಮ್ಮ ಕವಿತೆಗೆ ಒಂದು ಅದ್ಬತ್ ಕಲ್ಪನೇ ಕೋಟ್ಟಿದ್ದಿರಿ.
ಆ ಕವಿತೆಯ ಮೊದಲ ಚರನ ಹಾಗೂ ``` ಬದುಕಿ ಬಾಳಬಹುದಾದ ಯಾರನ್ನೂ ಹೊತ್ತೊಯ್ಯ ಬಹುದಾದ ಸಾವು
ನಾಳೆಗಳಿಗಿದ್ದ ಆಯಸ್ಸನ್ನು ಇಂದೇ ಮುಗಿಸುವ ನೋವು`` ಆ ಕವಿತೆಯ ಜೀವ . ಸರಳ ಶಬ್ದಗಳಲ್ಲಿ ಇಷ್ಟು ಚಂದನೆಯ ಕವಿತೆ ಹೇಗೆ ಬರದಿರಿ ? ಇದಕ್ಕೆ ಸ್ಪೂರ್ತಿ ಯಾವದು ? ಪ್ಲೀಜ್ ಇಲ್ಲಾ ಅನಬೇಡಿ ಹೇಲಿ ಮೇಡಂ
ಧನ್ಯವಾದಗಳೋಂದಿಗೆ

ಗೌತಮ್ ಹೆಗಡೆ said...

abbaa! eshtondu barediddeeri.good:)

ಭಾಶೇ said...

ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ತುಂಬಾ ಧನ್ಯವಾದಗಳು
ಕನಸು
ಈ ಕವನ ನಾನು ಜುಲೈ ೨೦೦೮ ಸುಮಾರಿನಲ್ಲಿ ಬರೆದಿದ್ದು! ಏನೋ ಹಳೇ ಕಾಗದ ತೆಗೆದಾಗ ಸಿಕ್ಕಿತು!
ಸ್ಪೂರ್ತಿ ಅಥವಾ ಬರೆದ ಕಾರಣ ಈಗ ನೆನಪಿಲ್ಲ! ನೆನಪಾದ್ರೆ ಹೇಳ್ತೀನಿ!
ಭಾಶೆ

ಸೀತಾರಾಮ. ಕೆ. / SITARAM.K said...

ಅಸಹಜ ಸಾವುಗಳು (ಕೊಲೆ ಅಥವಾ ಆತ್ಮಹತ್ಯೆ)-ಬರವಣಿಗೆಗೆ ಆಹಾರವಾಗುವದು ಅಥವಾ ಸುದ್ಧಿ ಎನಿಸುವವು. ಆದರೇ ಸಹಜ ಸಾವೊ೦ದು ಕವನಕ್ಕೇ ವಸ್ತುವಾಗಬಹುದೇ? ಈ ಚಿ೦ತನೆಯಲ್ಲಿ ತಮ್ಮ ಕವನ ವಿಶೇಷತೆ ಪಡೆವುದು. ಸಹಜ ಸಾವಿನ ಆಯಾಮಗಳ ತಮ್ಮ ಕವನ ಚೆನ್ನಾಗಿ ಮೂಡಿದೆ.

ಸಾಗರದಾಚೆಯ ಇಂಚರ said...

ತುಂಬಾ ಸುಂದರ ಕವನ
ವಿಷಯದ ಮೇಲಿನ ಹಿಡಿತ ಚೆನ್ನಾಗಿದೆ
ಸಾಲುಗಳು ತುಂಬಾ ಹಿಡಿಸಿದವು