Monday, December 13, 2010

ಬಳ್ಳಿ

ಹುಟ್ಟುವಾಗ ನಾವೆಲ್ಲರೂ ಒಂದೇ ಥರ
ಕೊಂಚ ಕೊಂಚವೇ ಬೆಳೆದಾಗ ಅರಿವಾಗುತ್ತೆ
ನಾವು ಬಳ್ಳಿಗಳೆಂದು, ನೀವು ಮರಗಳೆಂದು

ಮೊದಲು ಅಪ್ಪ ಎಂಬ ಮರಕ್ಕೆ ಒರಗಿ ನಿಂತು
ಅಲ್ಲಲ್ಲಿ ಕೆಲವು ಬಳ್ಳಿಗಳ ಬಿಟ್ಟು, ಅಂಟಿ
ಕಾಯುವುದು ನಮ್ಮದಾಗುವ ಮರಕ್ಕೆ

ಅಪ್ಪ ಮರದಿಂದ ಗಂಡ ಮರಕ್ಕೆ ಅಂಟಿದಂತೆ
ಶುರು ನಮ್ಮ ಬೆಳವಣಿಗೆ, ಹಬ್ಬುವಿಕೆ
ನಲವತ್ತೈವತ್ತು ವರ್ಷಗಳ ಒಡನಾಟಕ್ಕೆ ನಾಂದಿ

ನಿಮ್ಮ ಮೈಯೆಲ್ಲಾ ಹಬ್ಬಿ ತಬ್ಬಿ ಮುಚ್ಚಿಬಿಡುತ್ತೇವೆ
ಮೃದು ಕೈಗಳಿಂದ ಕಚಗುಳಿಯಿಟ್ಟು ತಟ್ಟಿ ಮುದ್ದಾಡುತ್ತೇವೆ
ಅಪ್ಪುತ್ತೇವೆ, ಆವರಿಸುತ್ತೇವೆ, ಆಧಾರವೂ ಆಗುತ್ತೇವೆ

ಈ ಬಳ್ಳಿ ಮರದ ಆಟದಲ್ಲಿ, ಬಳ್ಳಿಯೋ ಮರವೋ ಹುಟ್ಟಿ
ಕಣ್ಣೆದುರಿಗೇ ದೊಡ್ಡದಾಗುತ್ತದೆ, ಶುರು ಮತ್ತೆ ಸಂಸಾರ
ಇದೇ ಅಲ್ಲವೇ ಆ ದೇವನಾಡುವ ವ್ಯಾಪಾರ

ನಿಮ್ಮ ಒರಟು ಕೈ ಕಾಲುಗಳಿಗೆ, ಒರಟು ಮನಗಳಿಗೆ
ಕಚಗುಳಿಯಿಡುವ ಸೂಕ್ಷ್ಮತೆಯಿಲ್ಲ, ನಾವು ಒಪ್ಪಿಕೊಳ್ಳುತ್ತೇವೆ
ನಿಮ್ಮ ಅವಿರತ ಸ್ಪೂರ್ತಿಯಾಗಿ, ಅಮೃತ ಬಳ್ಳಿಗಳಾಗುತ್ತೇವೆ

ನಾವೇನಾದರೂ ಸತ್ತುಹೋದರೆ, ಬೆತ್ತಲಾಗುತ್ತೀರ ನೀವು ಜಗದೆದುರು
ನಾವು ಮುಚ್ಚಿಟ್ಟ ಒಣ ಬೊಡ್ಡೆಗಳು ಗಾಯಗಳೆಲ್ಲ ಆಚೆಗೆ
ಆಧಾರ ತಪ್ಪಿದಂತಾಗಿ ಸೊರಗುತ್ತೀರ, ಕೊರಗುತ್ತೀರ, ನಲುಗುತ್ತೀರ

ನೀವೇನಾದರೂ ಸತ್ತುಹೋದರೆ, ಬೀಳಗೊಡುವುದಿಲ್ಲ ನಾವು
ನಮ್ಮ ಬಳ್ಳಿಗಳಲೇ ಸುತ್ತುಗಟ್ಟಿ, ಮನದೊಳಗೇ ಸ್ಥಾಪಿಸಿ ಮುಂದುವರಿಯುತ್ತೇವೆ
ಮಗನದೋ, ಮಗಳದೋ ಆಸರೆಗಂಟಿ

ಬಳ್ಳಿ, ಬದುಕು, ಕಾಯಿ, ಮರ, ನೆನ್ನೆ, ನಾಳೆಗಳ ಗೋಜಲು
ಈ ಸಂಸಾರ, ಸಮಾಜ, ನೆರೆ ಹೊರೆ, ಬಂಧು, ಬಳಗಗಳು
ಬಾಳ ಹಾದಿಯ ಅನಿವಾರ್ಯ ಪುಟಗಳು, ಕೆಲವೊಮ್ಮೆ ಪರ್ವಗಳು

ಭಾಶೇ

6 comments:

kanasu said...

hey!!! chenagide :)

prabhamani nagaraja said...

ಕವನದ ಓಟ ಚೆನ್ನಾಗಿದೆ. ಆದರೆ ಮರ-ಬಳ್ಳಿ ಗಳ ಸಾ೦ಪ್ರದಾಯಿಕ ಉಪಮೆಯಿ೦ದ ಹೊರಬ೦ದು ಯೋಚಿಸಬೇಕಾದ ಸಮಯವಿದು. ಭಾವನಾತ್ಮಕ ಅನುಬ೦ಧವಿರಬೇಕು ಅವಲ೦ಬನೆಯಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಿಸಿ.

ಮನದಾಳದಿಂದ............ said...

ಕವನ ಇಷ್ಟ ಆಯ್ತು,
ಸಾಂಪ್ರದಾಯಿಕ ಉಪಮೆ ಕವನದ ಅಂದ ಹೆಚ್ಚಿಸಿದೆ.......
ಧನ್ಯವಾದಗಳು

Dr.D.T.Krishna Murthy. said...

ಚೆಂದದ ಕವನ!

ಕನಸು said...

ಹಾಯ್
ಭಾಶೇ ಮೇಡಂ
ನಿಮ್ಮ ಬಳ್ಳಿ ಬಹಳ ಸುಂದರವಾಗಿದೆ ಧನ್ಯವಾದಗಳು

Badarinath Palavalli said...

manasu taTTuva kavana. oMdiDee badukanna neevu anaavaraNagoLisida reeti paripakvavaagide.