Thursday, April 1, 2010

ಹೂವ ಹಿಡಿವ ಆಟ

ಬೇಸಿಗೆಯ ಬಿಸಿಲು ಮರಗಳಿಗೆ ಬಣ್ಣ ಬಳಿದಿತ್ತು
ಮರವು ಹೂವಾಗಿತ್ತು ಮರವು ಹಾಡಾಗಿತ್ತು
ನೆನ್ನೆ ಹೂವಾದ ಹೂವುಗಳು ಇಂದು ಭೂಮಿಗೆ ಮುತ್ತಿಕ್ಕಲು
ಗಾಳಿಯಲಿ ತೇಲುತ್ತ ಭೂಮಿಗಿಳಿದಿದ್ದವು ಮಣ್ಣಾಗಿದ್ದವು
ಹಾಗೆ ಹಾರಿದ ಹತ್ತು ಹಲವು ಹೂಗಳಲ್ಲಿ ಕೆಲವು ಮಾತ್ರ
ಆ ಹೂವಿನ ಲಂಗದ ಹುಡುಗಿಯ ಕೈಯೊಳಗಿದ್ದವು

ನೆನ್ನೆ ನಾಳೆಗಳ ಚಿಂತೆಯಿಲ್ಲದ ಆ ಪುಟ್ಟ ಹುಡುಗಿ
ಬೆಳ್ಳಂಬೆಳಗೇ ಹೊಸದೊಂದು ಆಟ ಹುಡುಕಿತ್ತು
ಮರದಿಂದ ಭೂಮಿಗುದುರುವ ಹೂಗಳ ಹಿಡಿವ ಆಟ
ತನ್ನ ಪುಟ್ಟ ಬೊಗಸೆಯೊಡ್ಡಿ ಗಾಳಿಯಂತೆ ಸುಳಿದು
ತೇಲಿ ಬರುತ್ತಿದ್ದ ಒಂದೊಂದೇ ಹೂಗಳ ಹಿಡಿಯುತ್ತಿತ್ತು
ಬೊಗಸೆ ತುಂಬಿದಂತೆ ಕಟ್ಟೆಗೋಡಿ ಗುಡ್ಡೆ ಹಾಕುತಿತ್ತು

ಹಾರಿ ಬಂದು ಕಣ್ಣ ತುಂಬುವ ಧೂಳಿಗೆ ಸ್ವಲ್ಪವು ಅಳುಕದೆ
ಕಾಲಿಗೊತ್ತುವ ಕಲ್ಲುಗಳ ನೋವನು ಅನುಭವಿಸದೆ
ಮರದ ಸುತ್ತಾ ಸುಳಿಯುತ್ತಿತ್ತು ಒಂದು ಮಿಂಚಂತೆ
ಅದು ಹೂಗಳ ಅದೃಷ್ಟವೇ ಮೆತ್ತಗಿನ ಕೈ ಸೇರುವುದು?
ಆ ಹುಡುಗಿಯ ಮುಖದ ಮೇಲೆ ನಲಿಯುತಿದ್ದ ನಗು
ಯಾವ ಹೂವ ನಗುವಿಗೂ ಕಮ್ಮಿಯಿರಲಿಲ್ಲ

ಮೇಲೇರಿದ ಎತ್ತರದಿಂದ ಕಷ್ಟಕ್ಕೊಳಗಾಗಿ ಬೀಳುವಾಗ
ಹೀಗೆ ಅಮೃತ ಸ್ತ್ರೀಯರು ನಮ್ಮ ಹಿಡಿಯುತ್ತಾರೆ
ಅವರೊಂದು ನಗುವಿಂದ ನಮ್ಮ ನೋವ ಮರೆಸುತ್ತಾರೆ
ನಮಗೆ ಜೀವದಾನವನೀಯುತ್ತಾರೆ ಹರಸುತ್ತಾರೆ
ಈ ಹೂವ ಬಾಲಿಕೆಗೆ ನನ್ನದೊಂದು ನಮನ ಧನ್ಯವಾದ
ನನಗೆ ಗುರುವಾದದಕ್ಕೆ ಈ ಕವನದ ಸ್ಪೂರ್ತಿಯಾದದ್ದಕ್ಕೆ

ಭಾಶೇ

4 comments:

ಜಲನಯನ said...

ಭಾಶೆಯವರೇ..ಎರಡು ಕುಸುಮಗಳ ತುಲನಾತ್ಮಕ ಭಾವಕ್ಕೆ ಪದಜೋಡಿಸಿ
ಪ್ರಕೃತಿಯ ಪ್ರತಿಕೃತಿಯನ್ನು ಹೆಣೆದಿದ್ದೀರಿ ಕವನವಾಗಿಸಿ,...ಇಷ್ಟವಾಯ್ತು..

ಸಾಗರದಾಚೆಯ ಇಂಚರ said...

ಭಾಶೆ ಯವರೇ
ಹೂವು, ಹುಡುಗಿ ಎರಡರಲ್ಲೊ ಸಾಮ್ಯವಿದೆ
ಒಂದು ನೋಡಿದೊಡನೆಯೇ ಮನಸ್ಸಿಗೆ ಹಿತ ಕೊಡುತ್ತದೆ, ಇನ್ನೊಂದು ನಮಗೆ ಜನ್ಮ ನೀಡಿ
ನಮ್ಮನ್ನು ಧರೆಗೆ ಬಿಡುತ್ತಾಳೆ
ಅಕ್ಕ, ತಂಗಿಯಾಗಿ ಸಲಹುತ್ತಾಳೆ,
ಹೆಂಡತಿಯಾಗಿ ಪೊರೆಯುತ್ತಾಳೆ,
ಸಖಿಯಾಗಿ ಕಾಯುತ್ತಾಳೆ
ಸುಂದರ ಅರ್ಥವುಳ್ಳ ಕವನ

ಮನಮುಕ್ತಾ said...

nice one.

ಸುಧೇಶ್ ಶೆಟ್ಟಿ said...

tumba chennagittu kavana...putta putta saalugalu kavanavannu chendhavaagisive....