ಅಪ್ಪಾ
ಇವತ್ತು ನಿನ್ನ ನೋಡ್ತೀನಿ ಅನ್ನೋ ಖುಷಿಗಿಂತ
ಇಷ್ಟು ದಿನ ನಿನ್ನ ನೋಡಿಲ್ಲ ಅನ್ನೋ ಬೇಜಾರು ಜಾಸ್ತಿ ಇದೆ
ಬೆಳಗ್ಗೆ ನಿಮ್ಮ ಜೊತೆ ಮಾತಾಡಿದ ಮೇಲೆ ಕಣ್ಣೆಲ್ಲಾ ಕಣ್ಣೀರೇ
ಅಷ್ಟು ಪ್ರೀತಿಸೋ ನಿಮ್ಮ ಜೊತೆ ದಿನಾ ಇರಕ್ಕಾಗಲ್ಲ
ನಿಮ್ಮ ತಿಂಗಳುಗಟ್ಟಲೆ ನೋಡಕ್ಕಾಗಲ್ಲ, ತಬ್ಬಕ್ಕಾಗಲ್ಲ
ದಿನ ಕಳೆದ ಹಾಗೆ ನಿಮ್ಮ ಬಿಟ್ಟಿರೋದು ಕಷ್ಟ ಆಗ್ತಾ ಇದೆ
ಅಪ್ಪಾ ನಿಮ್ಮ ಪ್ರೀತಿಸ್ತೀನಿ ಅಂತ ಸಾವಿರ ಸಲ ಕೂಗಿದರು
ನಿಮಗೆ ಫೋನ್ ಮಾಡಿದ್ರು, ನಿಮ್ಮ ಫೋಟೋ ನೋಡಿದರು
ನಿಮ್ಮ ನೆನೆಸಿ ದಿನ ಇಡಿ ಅಳುತ್ತ ಕೂತಿದ್ರು
ಸಮಾಧಾನ ಆಗಲ್ಲ ಗಿಲ್ಟ್ ಹೋಗಲ್ಲ
ನಿಮ್ಮ ಅಪ್ಕೊಂಡು ಕೈ ಹಿಡಿದು ನಡೆದ ರಾತ್ರಿಗಳು ನೆನಪಾಗುತ್ತವೆ
ನಿಮ್ಮ ಜೊತೆ ಬೈಕ್ ನಲ್ಲಿ ಸುತ್ತಿದ್ದು ನೆನಪಾಗುತ್ತೆ
ನಿಮ್ಮ ಬಿಟ್ಟು ಇಷ್ಟು ದೂರ ಇರೋದು ಕಷ್ಟ ಆಗ್ತಿದೆ
ನಾನು ಬೆಳೆದಿಲ್ಲ ಪಪ್ಪಾ, ನಾನು ದೊಡ್ಡವಳಾಗಿಲ್ಲ
ಸ್ಕೂಲ್ ಗೆ ಹೋಗೋವಾಗ ಮೀನಂಗಡಿ ಹತ್ರ ನನ್ನ ಸೈಕಲ್ ಮೇಲೆ ಕೂರಿಸಿ
ನೀವು ತಳ್ಳೋವಾಗ ನಿಮ್ಮ ಕಾಲು ಹಿಂದೆ ಹೋಗೋ ಹಾಗೆ ತೋರೋ ನೆರಳು
ವಾಪಾಸ್ ಬರೋವಾಗ ಇಳಿಜಾರಿನಲ್ಲಿ ಬಸ್ಸು ಲಾರಿಗೆ ನಾನು ಹೆದರಿ
ಅಪ್ಪಾ ಎಂದಾಗ ನಿಮ್ಮ ನಗು ಭರವಸೆ
ಗದ್ದೇಲಿ ಹೊಳೇಲಿ ಹೋಗೋವಾಗ ನೀವು ನನ್ನ ಪ್ಯಾಂಟು ಮಡಿಸಿದ್ದು
ನನಗಾಗಿ ನಿಮ್ಮ ಸೈಕಲ್ ನಲ್ಲಿ ಹಾಕಿಸಿದ ಬೇಬಿ ಸೀಟು
ಅಪ್ಪಾ... ನನಗೆ ಈ ದೊಡ್ಡೋಳು ಆಗೋದು ಬೇಕಿರಲಿಲ್ಲ, ನಾನು ಬೆಳೆದಿಲ್ಲ
ನಿಮ್ಮ ಜೊತೆಗಿದ್ದ ಅಷ್ಟು ವರ್ಷ ಅರ್ಥವಾಗದ ಪ್ರೀತಿ
ಈಗ ಹಗಲು ರಾತ್ರಿ ಕಾಡತ್ತೆ ಬಿಟ್ಟಿರುವ ನೋವು ಭೀತಿ
ಇಷ್ಟು ದಿನ ನನ್ನ ಗಂಡನ ಮಾತ ನಂಬಿದ್ದೆ
ಅವನೇ ನನ್ನ ಅತಿ ಹೆಚ್ಚು ಪ್ರೀತಿಸೋದು
ಇನ್ನು ಗೊತ್ತಿದೆ ಅವನದು ಎರಡನೇ ಸ್ಥಾನ
ನನಗೆ ಗೊತ್ತು ಅವನಿಗಿಂತ ಹೆಚ್ಚು ಪ್ರೀತಿ ನಿಮಗಿದೆ ನನ್ನಮೇಲೆ
1 comment:
'ಭಾಶೇ' ಅವ್ರೆ..,
ಅಪ್ಪನ ಬಗ್ಗೆ ಕವಿತೆ ಬರೆದಿರುವುದನ್ನು ಓದಿ ತುಂಬಾ ಖುಷಿಯಾಗುತ್ತಿದೆ..
ಕೇವಲ ಎಲ್ಲರೂ ಅಮ್ಮನನ್ನೇ ಜಪಿಸುತ್ತಾರೆ,ಅಪ್ಪನ ಬಗ್ಗೆ ಜಪಿಸುವ ನಮ್ಮಂತವರಿಲ್ಲವೇ ಎಂದುಕೊಂಡಿದ್ದೆ..
'ಈ ಬಿಸಿಲ ಬೇಗೆಯಲ್ಲಿ
ಅಪ್ಪನ ನೆನಪ ದೋಣಿ..'
ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com
Post a Comment