ನಾಳೆಯ ಊಟದ ಖಾತರಿ
ದಿನವಿಡೀ ದಣಿಸುವ ವ್ಯಾಪಾರ
ಕೊಂಡು, ಮಾರುವ ವ್ಯವಹಾರ
ಕಾಲ ಕಸುವು ಕದಲುವವರೆಗೂ
ಕೈಯ ಬಲ ಖಾಲಿಯಾಗುವವರೆಗೂ
ತಂದ ವಸ್ತುಗಳೆಲ್ಲಾ ಹೋಗಿ
ಚೀಲ ಮತ್ತೆ ಭರ್ತಿಯಾಗುವವರೆಗೂ
ಮತ್ತೆ ಮನೆಗೆ ಬರುವಷ್ಟರಲ್ಲಿ
ಪತಂಗಗಳೆಲ್ಲಾ ಪಲಾಯನಗೈದಿರುತ್ತವೆ
ಕಣ್ಣ ಬೆಳಕು ಮಂದವಾಗಿ
ಉಸಿರ ತಮಟೆ ತಣ್ಣಗಾಗಿರುತ್ತದೆ
ಬರಲೇ ಬೇಕಲ್ಲವೇ ಮತ್ತೆ ಮನೆಗೆ
ಅರೆ ಬರೆ ಬೆಂದ ಅನ್ನಕ್ಕೆ
ಉಪ್ಪು, ಹುಳಿ, ಖಾರವಿಲ್ಲದ ಸಾರಿಗೆ
ಹರಿದ ಕಂಬಳಿಗೆ, ಕಾಡುವ ನಿದ್ದೆಗೆ
ಮನೆಗೆ ತಂದ ಚೀಲಗಳ ತುಂಬಾ
ಒಡೆದ ಕನಸಿನ ಚೂರುಗಳು
ಮುರಿದ ಹೃದಯದ ತುಂಡುಗಳು
ಕಣ್ಣೀರು ಹೀರಿದ ಭಾರದ ಬಟ್ಟೆಗಳು
ರಾತ್ರಿಯಿಡೀ ಕೈತುಂಬ ಕೆಲಸ
ಹರಿದುದ ಹೊಲೆದು, ಮುರಿದುದ ಅಂಟಿಸಿ
ನಾಳೆಗೆ ಮತ್ತೆ ಅದೇ ತಯಾರಿ
ಎದೆಯೊಳಗೆ ಉಸಿರುತುಂಬುವ ಕೆಲಸ
ಭಾಶೇ
No comments:
Post a Comment