ಹಲವು ಹಗಲು ಹುಟ್ಟುವುದೇ ಇಲ್ಲ
ಕತ್ತಲು ಮಬ್ಬಾಗಿ ಹರಿದಿರುತ್ತದೆ
ಬೆಳಕು ಬಂದಿರುವುದಿಲ್ಲ
ಛಳಿಗಾಲದ ಹಗಲುಗಳಲ್ಲಿ
ಬಿಸಿನೀರು ಮೈಯ್ಯನೇ ತಾಕುವುದಿಲ್ಲ
ಮೃಷ್ಟಾನ್ನವನೇ ಬಡಿಸಿಕೊಂಡರೂ
ಘಮವೂ, ರುಚಿಯೂ, ತಿಳಿಯುವುದಿಲ್ಲ
ಒಳಗಿನ ಬೆಳಕೆಲ್ಲೋ ಕಳೆದುಹೋಗಿ
ಆತ್ಮದಿ ಹರಿವೇ ಇರುವುದಿಲ್ಲ
ಕೈಕಾಲು ತಣ್ಣಗಾಗದಿದ್ದರೂ
ಹೆಣವೆಂಬ ಭಾವನೆ ಹೋಗುವುದಿಲ್ಲ
ದೇವರ ಮುಂದಿನ ನಂದಾದೀಪ
ಕಣ್ಣಲಿ ಬೆಳಕ ತುಂಬುವುದಿಲ್ಲ
ಹತ್ತಾರು ನಾಳೆಗಳು ಮತ್ತೆ ಕಳೆವವರೆಗೂ
ಮತ್ತೊಮ್ಮೆ ಸೂರ್ಯ ಉದಯಿಸುವುದಿಲ್ಲ
ನನ್ನ ಸೂರ್ಯ ಮುಳುಗಿಹೋಗಿರುವುದು
ವಿಶ್ವಕ್ಕೆಲ್ಲಾ ಕಾಣುವುದಿಲ್ಲ
ಒಳಗನರಿತ ಕೆಲವರಿಗೆ
ಏನು ಮಾಡುವುದೆಂದು ತಿಳಿಯುವುದಿಲ್ಲ
ಭಾಶೇ