Saturday, September 21, 2024

ಕಾರ್ಯ ಕಾರಣ

ದಡದಿ ಗೂಟಕೆ ಕಟ್ಟಿದ ದೋಣಿ ನಾನು 
ಪ್ರತಿ ಮಳೆಯ ಪ್ರವಾಹದಲೂ ಸೆಳೆಯಲ್ಪಡುವೆನು 
ಹೋಗುವಾಸೆ ಯಾವುದೋ ದಡದತ್ತ 
ಹಗ್ಗ ಹರಕೊಂಡು ಹೋಗಲು ಅಳುಕು 

ಕೊಚ್ಚಿ ಬರುವ ಎಲ್ಲವೂ ಸತ್ತಿವೆ 
ನೀರು ಪ್ರಾಣವ ಉಳಿಸಲೂ ಹೌದು, ತೆಗೆಯಲೂ 
ನದಿಯಲೆಗಳಿಗೆ ದಡದ ಮಣ್ಣು ಕುಸಿವಾಗ 
ಅಂಜಲೇ, ಎಳೆಯಲೇ, ಗೊಂದಲವಾಗಿದೆ 

ಹೋಗಿ ತಲುಪಲ್ಯಾವುದೂ ಗುರಿಯಿಲ್ಲ 
ಪ್ರವಾಹ ಮುಂದುವರಿಸುವುದೆಂಬ ನಂಬಿಕೆಯಷ್ಟೇ 
ಹೆಣೆದ ಹಗ್ಗ ಮಳೆ ನೀರಲಿ ನೆಂದು ಹಿಸಿಯುತಿದೆ 
ಕಡಿದು ಹೋಗುವ ಮುನ್ನ ಮಳೆಗಾಲವೇ ಮುಗಿವುದೇ? 

ಕಾರಣ ಯಾವುದಾದರೂ ತೇಲಿಬಂದರೆ 
ಈ ಬದಿಗೋ, ಆ ಬದಿಗೋ, ಆದೇನು 
ಬರೀ ಮಳೆ, ಗಾಳಿ, ಪ್ರವಾಹವೇ ಆದರೆ 
ಗೂಟಕ್ಕೆ ನಮಿಸಿ ನಿಂತಲ್ಲೇ ನಿಂತೇನು 

ಭಾಶೇ 

No comments: