Tuesday, September 3, 2024

ತಕ್ಕಡಿ

ನಾನು ಬಟ್ಟಲಲಿ ವಜ್ರಗಳನ್ನೇ ಸುರಿದೆ 
ನೀನು ಕಲ್ಲುಗಳನೇ ಹಾಕಿದೆ 
ತಕ್ಕಡಿ ಸರಿಸಮವಾಯ್ತು 
ಗೆದ್ದವರಾರು, ಸೋತವರಾರು? 

ಹತ್ತು ದಿಕ್ಕುಗಳೂ ಎಳೆಯುತಿವೆ 
ನನ್ನಾತ್ಮ ಹಲಸಿನ ಮೇಣ 
ಒಳಗೆ ಅಡಗಿರುವುದು 
ಕೋಹಿನೂರಿಗೂ ಮಿಗಿಲು 

ಅಂಗಾಲು ರಕ್ತ ಚಿತ್ತಾರ 
ಗಮನವಿಟ್ಟು ಅಡಿಯಿಡುತ್ತೇನೆ 
ನೆಲದ ಮೇಲೆಲ್ಲಾ 
ಮುರಿದ ನಕ್ಷತ್ರಗಳ ಚೂರು 

ಅಚ್ಚಿಗೆ ಸುರಿದ
ಸಕ್ಕರೆ ಗೊಂಬೆಗಳೆಲ್ಲಾ ಮುರುಕಲು
ಪಾಕ ಕಾಯುತ್ತಲೇ ಇರುತ್ತದೆ 
ಓಲೆ ಉರಿವವರೆಗೂ 

ಚಿತೆಗೆ ಬೆಂಕಿ ಹಚ್ಚಿದ ಮೇಲಷ್ಟೇ 
ಈ ಕವಿತೆ ಮುಗಿಯುವುದು 
ದೀರ್ಘವೋ, ಹೃಸ್ವವೋ ಪ್ರಯಾಣ 
ಖಾಲಿ ಚೀಲಗಳ ಭಾರ ಗಂಟಿರುವುದು 

ಭಾಶೇ 

No comments: