ಮನೆಯಿಂದ
ಬರುತ್ತೇನೆಂದು ಹೇಳಿದಂದಿನಿಂದ
ಎದೆಯೆಲ್ಲಾ ಸಂಭ್ರಮ
ಬಂದಿಳಿದ ದಿನ
ಸ್ವರ್ಗದ ಬಾಗಿಲು ತೆರೆದಂತೆ
ಬರುವಳೆಂಬ ಕಾತರ
ಬಂದಾಗಿನ ಸಡಗರ
ಮುಗಿದು
ಹೊರಡುವಳೆಂದು ಬೇಸರ
ಶುರುವಾಗಿದೆ
ಇರುವುದು ವಾರವೇ ಆದರೂ
ವರ್ಷಕ್ಕಾಗುವಷ್ಟು ಮಾತು
ಅವಳದ್ದು, ನನ್ನದ್ದು,
ಎಲ್ಲರದ್ದು
ಒಂದಷ್ಟು ನಮ್ಮಿಬ್ಬರದಷ್ಟೇ
ಅಡುಗೆ ಮನೆಯಲ್ಲೇ ಕೂತು
ಪ್ರಪಂಚವಿಡೀ ಪ್ರಯಾಣ
ಅವಳ ಬಾಯಿ ರುಚಿ
ನನ್ನ ತಿನಿಸುವ ಬಯಕೆ
ವಾರ ಮುಗಿಯುವುದೇಕೆ?
ಮಗಳು ಹೊರಟಿದ್ದಾಳೆ
ಮನೆಗೇನೆ
ಗಂಡ, ಮಕ್ಕಳು, ಸಂಸಾರ
ಚೆನ್ನಾಗಿಯೇ ಕಾಣುವ ಅತ್ತೆ ಮಾವ
ದುಡಿಮೆ, ಗಳಿಕೆ, ಸ್ನೇಹ
ಖುಷಿಯಾಗಿಯೇ ಇದ್ದಾಳೆ
ಕಣ್ಣಿಂದ ದೂರದಲ್ಲಿ
ಅದು ಅವಳಮನೆಯಾಗುತ್ತಿದೆ
ಇದು ನನ್ನಮನೆಯಾದಂತೆ
ಭಾಶೇ
No comments:
Post a Comment