ಕಣ್ಣಿಗೆ ಬೈನಾಕ್ಯುಲರ್ಸ್ ಹಾಕಿದೆಯೇ?
ಕೈಚಾಚಿ ತಡಕಾಡುತ್ತೇನೆ, ಅರಿವಿಲ್ಲದೇ
ಹಿಡಿದೇ ಬಿಡುತ್ತೇನೋ ಎಂಬಂತೆ
ಇದೆಯೋ, ಇಲ್ಲವೋ, ಯಾರಿಗ್ಗೊತ್ತು?
ಮೈತೊಳೆದು ಶುಚಿಯಾಗಿ ನಿಂತರೆ
ಧೂಳಿನ ಬಿರುಗಾಳಿ, ರಂಧ್ರಗಳ ತುಂಬೆಲ್ಲಾ ಮಣ್ಣು
ಬರ ಸತ್ತ ಊರಲ್ಲಿ, ನೀರೆಲ್ಲಿ ಹುಡುಕಲಿ
ಉಸಿರ ಏರಿಳಿತ ನಿಧಾನಕ್ಕೆ ಸರಿಯಾಗಿ
ಕಾದಿದ್ದು ಯಾಕಾಗಿ, ಗೊತ್ತಿಲ್ಲವೇ!
ದಾರಿಬದಿ ಗೂಟನೆಟ್ಟು ಬಂದಿದ್ದೇನೆ
ನನ್ನ ಕಾಲನೇ ಕಟ್ಟಿಹಾಕಬಹುದು
ದಿನದಿನಕ್ಕೆ ಸೀದು ಹೋದ ರಕ್ತ
ಕೈ ಕಾಲುಗಳಲೇ ಶಕ್ತಿ ಉಡುಗಿಹೋಗಿರುವಾಗ
ರೆಕ್ಕೆಗಳನೇಕೆ ಕಟ್ಟಿಕೊಳ್ಳಲಿ?
ಭೂತದಲ್ಲಿ ಬದುಕಬಾರದು, ಬೆಳಕಿಲ್ಲ
ಕಣ್ಣಿಗೆ ಕಾಣುವಷ್ಟು ದೂರದಲೆಲ್ಲೂ ನೆರಳಿಲ್ಲ
ಬೆತ್ತಲಾಗಿ ಕನ್ನಡಿ ಎದುರು ನಿಂತರೆ
ಬೆನ್ನಲ್ಲಿ ನಡುಕವೊಂದು ಓಡುತ್ತದೆ
ನಾನು ಹೀಗೆ ಉಳಿದಿರುವದಾದರೂ ಏತಕ್ಕೆ?
ಭಾಶೇ
No comments:
Post a Comment