ನನ್ನ ರಕ್ತವನೇ ಹೀರುತ್ತಿವೆ
ಬಾಂದಳಿಕೆಗಳು
ಅಸಹಾಯಕಳಾಗಿದ್ದೇನೆ
ಮೆದುಳು ನನ್ನದೇ, ಯೋಚನೆಗಳು?
ಬೀಜ?
ಗಾಳಿಯಲ್ಲೇ ಹಾರಿ ಬರುತ್ತವೆ
ನನಗರಿವಿಲ್ಲದಂತೆ ಒಳಸೇರುತ್ತವೆ
ಹುಟ್ಟು ಸಣ್ಣದೇ
ಬೆಳೆದು ಬೃಹತ್ತಾದಾಗ
ನಾನ್ಯಾರು, ಬಾಂದಳಿಕೆಯಾರು?
ಕಲಸುಮೇಲೋಗರ, ಕಗ್ಗಂಟು
ರೆಂಬೆಗಳಿಗೆ ಕೈ ಇದ್ದಿದ್ದರೆ?
ಕಿತ್ತು ಬಿಸುಡುತ್ತಿದ್ದೆನೇ?
ಈಗ, ಅಭಾವ ವೈರಾಗ್ಯ
ಅಥವಾ, ನಿಲುಕದ ದ್ರಾಕ್ಷಿ ಹುಳಿ?
ಎಲ್ಲೋ ಬೆಳೆಯಬೇಕಾದವು
ನನ್ನಲ್ಲಿ ಸಿಕ್ಕಿಬಿದ್ದವೇ?
ಸಾವವರೆಗೂ ಬದುಕಬೇಕಲ್ಲ
ಬಾಂದಳಿಕೆಗಳಿಗೂ ಜೀವವಿದೆ
ಸ್ವಾತಂತ್ರ್ಯ ಅವುಗಳ ಆಯ್ಕೆಯಲ್ಲ
ನನ್ನ ವಿವರಣೆಯಷ್ಟೇ
ಪರಾವಲಂಬಿ ಸಸ್ಯಗಳ
ಜಗವರಿತಿರುವ ಗುಟ್ಟು
ಇವು ನನ್ನ ಮುಗಿಸಬಹುದು
ಇಲ್ಲಾ ನನ್ನ ಮೀರಿ ಬೆಳೆದು
ತಾವೇ ಬೇರಾಗಿ, ಬಾನಾಗಿ
ನನ್ನನೇ ಸಾಕಬಹುದು
ಭಾಶೇ
No comments:
Post a Comment