ಅಸಾಧ್ಯ ಎಂದು ಹೆಸರಿಡುತ್ತೇನೆ
ಬೀಜ ಕೊಳೆಯಬಹುದೆಂದು
ಹೆದರಿ ಹುರಿದುಬಿಡುತ್ತೇನೆ
ಅವಕಾಶ ಬಂದು ತಟ್ಟಿದಾಗ
ಆಮೆಯಂತೆ ಒಳಸರಿಯುತ್ತೇನೆ
ಹಗಲುಗನಸುಗಳ ಜೇಡರಬಲೆಯಲ್ಲಿ
ಸಿಕ್ಕಿ ಸಮಯ ಕೊಲ್ಲುತ್ತೇನೆ
ಮನೋರೋಗಕ್ಕೆ ಮದ್ದಿಲ್ಲ
ನಂಬದ ದೇವರು ಬಂದು ಕಾಯಲ್ಲ
ನಂಬಿದ ಮನುಷ್ಯರು ನಂಬಿಕೆಗೆ ಅರ್ಹರಲ್ಲ
ಕನಿಕರಕ್ಕೆ ಅಳುತ್ತಿರುವೆನೇ?
ಕಣ್ಣೀರನ್ನೇ ಪ್ರಶ್ನಿಸುತ್ತೇನೆ
ಏಕಾಂತವೇ ಜೀವನವಾದಾಗ
ಉತ್ತರಗಳೆಲ್ಲಾ ಮೌನವೇ
ಬೆಳಕ ಕಿಂಡಿಯೊಂದು ಕಂಡರೆ
ಅಲ್ಲೇ ನೆಟ್ಟು ದೃಷ್ಟಿ
ನಿರೀಕ್ಷಿಸುತ್ತೇನೆ
ಬದುಕು ಬದಲಿಸುವುದೆಂದು
ನಕಾರಾತ್ಮಕವ ಬಿಡಬಹುದೆಂದು
ಸಕಾರಾತ್ಮಕವ ಕೈ ಹಿಡಿಯಬಹುದೆಂದು
ಕಾರ್ಮೋಡ ಕವಿದಾಗ
ಕರಗಿ ಮಳೆಯಾಗಿ ಸುರಿವುದೆಂದು
ಬೆಳಕು ಹರಿವುದೆಂದು
ನಾಳೆಗಳಲ್ಲಿ
ಭಯವೂ ಇದೆ, ಭರವಸೆಯೂ
ಕನಸೂ ಇದೆ, ದುರ್ಬಲತೆಯೂ
ಅನಿಶ್ಚಿತತೆಯೂ ಇದೆ, ಧೃಡತೆಯೂ
ಉರಿದು ಆರುವುದೇನೋ ಎನುವ
ನನ್ನ ಎದೆಯ ದೀಪಕ್ಕೆ
ನಾನೇ ಎಣ್ಣೆ ಹಾಕಬೇಕು
ನಾನೇ ಬತ್ತಿ ಹೊಸೆಯಬೇಕು
ನಾನೇ ಕೈ ಹಿಡಿದು ಕಾಯಬೇಕು
ನಾನೊಬ್ಬಳೇ ನನ್ನ ವಿಶ್ವವ
ಭುಜಗಳ ಮೇಲೆ ಹೊತ್ತು ನಿಲ್ಲಬೇಕು
ಉಬ್ಬರಗಳೂ, ಇಳಿತಗಳೂ,
ನನ್ನ ಸಮುದ್ರದಲೂ ಆಗುತ್ತವೆ
ನಾನೇ ವೀಕ್ಷಕಿಯಾಗಬೇಕು
ನಾನೇ ಚಂದ್ರಮನೂ
ಆಸೆಗಳು ನನ್ನವಾದರೆ
ದುಡಿವ ಕೈಗಳೂ
ಪ್ರೀತಿ ನನ್ನದಾದರೆ
ಮಿಡಿವ ಹೃದಯವೂ
ಕತ್ತಲೆಯಿಂದ ಬೆಳಕಿನಡೆಗೆ
ನನ್ನದೇ ಆಗಲಿ ನಡಿಗೆ
ಅಸಾದ್ಯವೆಂದು ಹೆಸರುಹೊತ್ತ ಕನಸುಗಳ
ನನಸುಮಾಡುವ ಶಕ್ತಿಬರಲಿ ನನಗೆ
ಭಾಶೇ
No comments:
Post a Comment