ಗೋಡೆಗಳ ಬಣ್ಣ ಮಾಸಿದೆ
ವಯಸ್ಸಾಗಿ ಒಣಗಿದೆ
ಬಳ್ಳಿಗಳ ಬೊಜ್ಜು ಬೆಳೆದು
ಗಿಡಗಳ ನರಗಳು ಸುತ್ತುಗಟ್ಟಿವೆ
ತೆಂಗಿನಮರ ಕಾಯಿ ಬಿಡುವುದ ನಿಲಿಸಿದೆ
ಕೇಳುವ ಭಾಷೆಗಳು ಅಪರಿಚಿತವಾಗಿವೆ
ಹೊರಗಿನ ಹೊಸಗಾಳಿ
ಒಳಗಿನ ಬಿಸಿಯುಸಿರು
ಬೆರೆಯದಂತೆ ಗಾಜು ತಡೆದಿದೆ
ಹೊರಗೆ ಬಣ್ಣ ಬದಲಾಗುತ್ತಿದೆ
ಒಳಗಿನ ಕಣ್ಣು ಮಬ್ಬಾಗುತ್ತಿದೆ
ಯಾರಿಗೋ ಬೇಕಿದೆ ಈ ಜಾಗ
ಪಕ್ಕದ್ದು, ಹಿಂದಿದ್ದು, ಮುಂದಿದ್ದು
ಹಳೆಯದನೆಲ್ಲಾ ಗುಡಿಸಿ, ಬಿಸಾಕಿ
ಬೇರುಗಳಿಳಿಯದ ಆಳದಿಂದ ಕಲ್ಲು ಕಟ್ಟಿ
ಹೊಸ ಕಟ್ಟಡಗಳ ಎಬ್ಬಿಸಲು
ಹಳೆಯ ವಿಳಾಸಗಳ ಅಳಿಸಿಹಾಕಲು
ಹಳೆಯ ರಾಗವೊಂದು ಇನ್ನೂ ಬದುಕಿದೆ
ಖುರ್ಚಿಗೇ ಬೆನ್ನಂಟಿಸಿ, ಬೇರಿಳಿಸಿ
ಹೊಸತಾಗಿ ಬರುವ ಸಾವಿಗೆ ಕಾಯುತ್ತಾ
ಬೆಳವಣಿಗೆಯ ಬದಲಾವಣೆಗೆ ಇದೂ ಶಿಕಾರಿ
ಗೋಡೆಗಳು ಮುರಿದಂತೆ ಉಸಿರುಗಳು ಹಾರಾಡಿ
ಹಸಿರು ನೆನಪಷ್ಟೇ, ನೆವಕ್ಕಷ್ಟೇ
ಭಾಶೇ
No comments:
Post a Comment