Wednesday, August 7, 2024

ನಗುದೀಪ

ಕಸ ಆಯುವವನೊಬ್ಬ 
ಬೀದಿ ಗುಡಿಸುವವಳೊಬ್ಬ 
ಬೆಳ್ಳಂಬೆಳಗೇ ಬೀದಿಯಲಿ 
ಬೇಕರಿಯ ಮುಂದೆ ನಿಂತು 
ಟೀ ಕುಡಿಯುತ್ತಾ 
ಮನಸಾರೆ ನಗುತ್ತಿದ್ದರು 

ಕಪ್ಪು ಮೈ ಬಣ್ಣ 
ಅಚ್ಚ ಬಿಳಿಯ ಸಾಲು ಹಲ್ಲು 
ಉಕ್ಕುಕ್ಕಿ ಬಂದ ನಗು 
ಬೀದಿಯಲಿ ಹರಡಿತ್ತು 

ಕೆಲಸಕ್ಕೆ ತಡವಾಗಿ 
ಬರಿದೆ ಅವಸರದಲ್ಲಿ 
ಹುಬ್ಬು ಗಂಟಿಕ್ಕಿ 
ಓಡುತ್ತಿದ್ದ ಮಂದಿ 
ಈ ನಗೆಬುಗ್ಗೆಯ 
ಕಾಣದೇ ಸಾಗುತ್ತಿದ್ದರು 

ನಗುವಿಗೆ ಬೇಧವಿಲ್ಲ 
ನಗುವಿಂದ ನಗು ಹಚ್ಚಿ 
ನನ್ನ ಮುಖವ ಅರಳಿಸಿ 
ನಾ ಮುನ್ನಡೆದೆ 

ಭಾಶೇ 

No comments: