Sunday, August 25, 2024

ಬೆಂಕಿ

ಪಕ್ಕದ ಮನೆಗೆ ಬೆಂಕಿಬಿದ್ದರೆ 
ಬಿರು ಬೇಸಗೆಯಲ್ಲೂ 
ಛಳಿ ಕಾಸುತ್ತೇನೆ. 
ರಹಸ್ಯವಾಗಿ 
ಬೆಂಕಿ ಬೀಳಲೆಂದು ಬೇಡುತ್ತೇನೆ.
ರಾತ್ರಿ ನಿದ್ರೆಯ ಮಧ್ಯ 
ಕಿಡಿಕಾರುವ ಕೆಂಡಗಳನು 
ಊರಲ್ಲಿ ಹರಡಿಬರುತ್ತೇನೆ.
ಬೆಂಕಿ ಹಚ್ಚುವ ಧೈರ್ಯವಿಲ್ಲದೆ 
ಗಾಳಿಯ ಊದಲು ಬೇಡುತ್ತೇನೆ. 

ನನ್ನ ಮನೆಯ ಬಗ್ಗೆ ಭಯವಿಲ್ಲ 
ಮೌಲ್ಯಗಳ ಮೇಲೆ ನಿಂತಿದೆ 
ಬೆಂಕಿ ಸುಡಲಾರದ್ದು 
ನೀರು ತೊಳೆಯಲಾರದ್ದು 

ಮನೆಯ ಮುಂದೆ ತುಳಸಿಯಿದೆ 
ಕೈಯಲಿ ಜಪಮಾಲೆ 
ಶಂಖ, ಜಾಗಟೆ, ತ್ರಿಶೂಲ, ಉಳಿದೆಲ್ಲವೂ 
ವಿಭೂತಿ, ಕುಂಕುಮ, ಚಂದನವೂ 
ಮನೆಯ ಸುತ್ತಾ ಹೂವು ಬಿಟ್ಟ ಗಿಡಗಳು 

ಒಳಗಿನದ್ಯಾವುದೋ ಧ್ವನಿ 
ಹೇಳುತ್ತಲೇ ಇದೆ 
ಪರರ ನೋವಲ್ಲಿ ನಿನ್ನ ಸುಖವಿಲ್ಲ 
ಅವರ ದುರ್ಗತಿ, ನಿನ್ನ ಏಳ್ಗೆಯಲ್ಲ 
ಆದರೆ 
ಮಾಡಿದ್ದನ್ನೇ ಮಾಡಿ 
ಹೊಸ ಉತ್ತರವ ಕಾಯುತ್ತೇನೆ. 

ಊರ ತುಂಬಾ ಹಬ್ಬಿದ ಬೆಂಕಿ 
ನನ್ನ ಮನೆಯನೂ ಸುಟ್ಟೀತು 
ಹೊಗೆ, ನನ್ನ ಉಸಿರನೂ ಹಿಡಿದೀತು 
ಮರೆತೇಬಿಡುತ್ತೇನೆ, ಹೆದರಿಕೆಯಿಲ್ಲದೆ 

ಭಾಶೇ 

No comments: