Friday, August 16, 2024

ಅನಿವಾರ್ಯ ವಿನಾಶ

ಮುಗಿಯಿತು, ಮುಗಿಯಿತು, 
ಮುಗಿದೇ ಹೋಯಿತು 
ಭೂಮಿಯ ಮೇಲೆ ನಮ್ಮಾಯಸ್ಸು 

ಅಲ್ಪರ ಅಲ್ಪ ಆಸೆಗಳಿಗೆ 
ಸ್ವಲ್ಪ ಆರ್ಥಿಕ ಬೆಳವಣಿಗೆಗೆ 
ಸಮಷ್ಟಿಯ ದೃಷ್ಟಿ ಮಾಯವಾಯ್ತು 

ಅತಿ ಶ್ರೀಮಂತರು ಚಲಾಯಿಸುತಿಹರು 
ಸಾಮಾನ್ಯರ ಆಳುವ ಸರ್ಕಾರ 
ಅವರೇ ಸಮಸ್ಯೆ, ಅವರೇ ಪರಿಹಾರ 

ನಾನು, ನನ್ನದು, ನನಗೆ ಬೇಕೆಂದು 
ಕಾಡನೂ, ನಾಡನೂ, ಕೊಂಡಿಹರು 
ಪ್ರಾಣಿಗಳೂ, ಮಾನವರೂ, ಅತಂತ್ರರು 

ಯುದ್ದಗಳಂತೂ ನಡೆದೇ ಸಾಗಿವೆ 
ಭೂಮಿಯ ಮೇಲೂ ಅತ್ಯಾಚಾರ 
ಮಾನವ ಪ್ರಾಣಿಯ ಆಸೆ ಸಹಸ್ರ 

ಪ್ರವಾಹಗಳೂ, ಬರಗಾಲಗಳೂ 
ಕಾಳ್ಗಿಚ್ಚು, ಉಷ್ಣ ಮಾಋತಗಳೂ 
ತೆಗೆಯಲಿವೆ ನಮ್ಮವರದ್ದೇ ಪ್ರಾಣಗಳ 

ಉಳಿಯ ಬಹುದು ಅತಿ ದುಡ್ಡಿರುವವರು 
ಅಸಮಾನತೆಯ ಸಮಾಜದಲ್ಲಿ 
ದುರಂತಗಳ ಮೇಲೆ ಹಣದ ಹೂವ ಚೆಲ್ಲಿ 

ನಾನೂ, ನೀವೂ, ನಮ್ಮ ಮಕ್ಕಳೂ 
ತಯಾರಾಗೋಣ ಅನಿವಾರ್ಯತೆಗೆ 
ಖಂಡಿತವಾಗಿ ಬಂದೆರಗುವ ವಿನಾಶಕ್ಕೆ 

ಭಾಶೇ 

No comments: