ಶಬ್ದಗಳೆಲ್ಲಾ ನಿದ್ದೆ ಮಾಡುವ ಹೊತ್ತು
ನೆಲಕ್ಕೂ ಅಷ್ಟು ಆರಾಮ ಬೇಕಿತ್ತು
ಬೆಳದಿಂಗಳಿದ್ದರೂ ಇಲ್ಲದಿದ್ದರೂ
ಬಾನಂಗಳದ ತುಂಬಾ ರಂಗೋಲಿಯಿತ್ತು
ಭೂತ ಪ್ರೇತಗಳ ಭಯವಿತ್ತು
ಹೇಳುವ ಕಥೆಗಳು ಯಾರಿಗೆ ಗೊತ್ತು?
ಉಸಿರ ಮೇಲೆ ಗಮನವಿಟ್ಟರೆ
ಶಾಂತಿ ಉಕ್ಕುಕ್ಕಿ ಹರಿವ ಹೊತ್ತು
ಹಗಲಲ್ಹೇಗೆ ಎದ್ದು ಹೋದಾನು?
ಎಷ್ಟು ಮಂದಿಗೆ ಉತ್ತರಿಸಿಯಾನು?
ಬಂಧನದ ಸರಪಳಿಯ ಬಿಚ್ಚುವಾಗಿನ
ಸದ್ದ ಹೇಗೆ ಅಡಗಿಸಿಯಾನು?
ಎದ್ದು ಹೋದನು ಅವನು ಮಧ್ಯ ರಾತ್ರಿಯಲಿ
ಸೃಜನಿಕೆಯ ಅಮೃತ ಮಹೂರ್ತದಲ್ಲಿ
ಉತ್ತರಗಳ ಹುಡುಕುವ ಗುಂಗಿನಲ್ಲಿ
ತನ್ನ ದಾರಿಗೆ ತಾನೇ ಪ್ರಕಾಶ ಚೆಲ್ಲಿ
ಭಾಶೇ
No comments:
Post a Comment