ನನ್ನ ಗಂಡನವಲ್ಲ
ನನ್ನ ಮಕ್ಕಳದಲ್ಲ
ನನ್ನ ಹೆತ್ತವರದಲ್ಲ
ಗೆಳೆಯ, ಹಿತೈಷಿ,
ಇವರಾರದೂ ಅಲ್ಲ
ಇವರಾರೂ ನನ್ನಂತೆ
ಯೋಚಿಸುವುದಿಲ್ಲ
ಭಾವಿಸುವುದಿಲ್ಲ
ಚಿಂತಿಸುವುದಿಲ್ಲ
ಅನುಭವಿಸುವುದಿಲ್ಲ
ಕೊರಗಿ, ಸೊರಗುವುದಿಲ್ಲ
ನಮ್ಮ ಪಥಗಳು ಜೊತೆಯಾದರೂ
ನನ್ನ ದಾರಿಯ
ಇವರ್ಯಾರೂ ಕ್ರಮಿಸುವುದಿಲ್ಲ
ನೆನ್ನೆಗಳ ಬದುಕಿಲ್ಲ
ನಾಳೆಗಳ ಕಾಣುವುದಿಲ್ಲ
ಇಂದ ಹಂಚುವುದಿಲ್ಲ
ಹೊರಗಿನದ್ಯಾವುದೂ
ಹೊರಗಿನವರ್ಯಾರೂ
ನನ್ನ ಒಳಗನ್ನು ಅರಿಯುವುದಿಲ್ಲ
ಮಿತಿ ತಿಳಿಯುವುದಿಲ್ಲ
ಆತ್ಮವಿಶ್ವಾಸ ಹೆಚ್ಚಿಸಲು ಸಲ್ಲ
ಕುಂದೂ ಮಾಡಬಾರದಲ್ಲ!
ಹಂಚಬಹುದಾದದ್ದು
ಕ್ಷಣಿಕದ ಕಾಮ
ಕಾಡುವ ಭಾವ
ಅಳಿಸಿ, ನಗಿಸಿದ ಘಟನೆ
ಊಟ, ತಿಂಡಿ,
ದೇಹದ ಹೊರಗಿನದಷ್ಟೇ
ಆಗಬೇಕಾದದ್ದು
ಒಳಗಿಂದಲೇ ಪೂರ್ಣವಾಗಬೇಕು
ಹಣ್ಣು ಬಲಿತು, ಮಾಗಬೇಕು
ನನಗೆ ನಾನೇ ಸಾಕಾಗಬೇಕು
ಹೊರಗಿನವರ ಚಿಂತೆ ಬಿಟ್ಟು
ಒಳಗೊಳಗೇ ಪಕ್ವವಾಗಬೇಕು
ಭಾಶೇ