Tuesday, June 11, 2024

ವಿದ್ರೋಹ

ಎಲ್ಲಿ ಬಿಟ್ಟು ಹೋಯ್ತೋ 
ಅಲ್ಲಿಂದಲೇ ಶುರುಮಾಡಲಾಗಲ್ಲ 
ನಿನ್ನ ಬೆಚ್ಚನೆಯ ಕೈ ಹಿಡಿತ ತಪ್ಪಿ 
ನನ್ನ ಕೈ ಮರಗಟ್ಟಿ ಹೋಗಿದೆ 
ನನಗರಿವಾಗದೇನೇ 
ಮುಳ್ಳುಗಳ ಸರಮಾಲೆ ಸುತ್ತಿದೆ 
ಹರಿದು ಹೋದ ಕಣ್ಣೀರನೂ
ವಾಪಸ್ಸು ತರಲಾರೆ 
ಬಿಟ್ಟು ಹೋಗಿದ್ದು ಎಲ್ಲೋ 
ನಾನೀಗ ನಿಂತಿರುವುದು ಇನ್ನೆಲ್ಲೋ 

ಸೇತುವೆ ಕೆಳಗಿನ ನೀರು 
ಹರಿದು ಹೋದದ್ದು ನೀರಲ್ಲ 
ನನ್ನ ಎದೆಯ ಉಸಿರು 
ಸೇತುವೆಯೂ ಉಳಿದಿಲ್ಲ 
ಭಾವನೆಗಳ ಪ್ರವಾಹಕ್ಕೆ 

ಬಿಟ್ಟು ಹೋದವನ 
ಕಳೆದು ಹೋದವನ 
ಕಾಯಲು 
ನೀ ಕೃಷ್ಣನೂ ಅಲ್ಲ 
ನಾ ರಾಧೆಯೂ ಅಲ್ಲ 
ಇದು ಅಂತಹ ಪ್ರೀತಿಯೂ ಅಲ್ಲ 

ಹನಿಯಾಗಿ ಜಿನುಗಿದ್ದು 
ತೊರೆಯಾಗಿ ಹರಿದಿದ್ದು 
ನದಿಯಾಗಿ ಕೊಚ್ಚಿದ್ದು 
ಇಂದು ಬತ್ತಿಹೋಗಿದೆ 
ಕಾಲ ಕಾರಣನೇ? 
ಹವಾಮಾನ ವೈಪರೀತ್ಯವೇ? 
ಪ್ರಕೃತಿ ವಿಕೋಪವೇ? 

ಆದದೆಲ್ಲಾ ಆಗಿಹೋಗಿದೆ 
ಬದಲಾವಣೆ ಜಗದ ನಿಯಮ 
ನೆನ್ನೆ ಮನಸಿಗೆ ಕೀಲಿಯಾಗಿದ್ದು 
ಇಂದು ಅಹಿತವೂ,
ಅಸಹ್ಯವೂ ಆಗಬಹುದು 

ಹೊಸ ಆರಂಭಗಳು 
ಹಳೆಯ ಸ್ಲೇಟಿನ ಮೇಲಾದರೆ 
ಬರೆದಳಿಸಿದ ಗುರುತು 
ಕಾಡದಿರಲಾರದು 

ಸೌಮ್ಯಶ್ರೀ ಗೋಣೀಬೀಡು 

No comments: