Monday, June 3, 2024

ಅನಂತ

ಎಲ್ಲ ತೊರೆದು ನಿಂತ ಬುದ್ಧನೆದುರು 
ಹರಿಯಗೊಡಲೇ ನನ್ನ ಪ್ರೀತಿ ನೆತ್ತರು? 
ನನ್ನ ಇರುವಿಕೆಯನೇ ಪರಿಗಣಿಸದವ 
ಹರಿದು ಹೋಗುವ ಕಣ್ಣೀರಿಗೆ ಕರಗ್ಯಾನೇ? 

ಕನಸುಗಳ ಅರಸುತ್ತಾ ಕಾಡಹತ್ತಿದೆ
ಚೀಟಿ ಗಿಡದ ತುಂಬಾ ಹೂವು ಬಿಟ್ಟಿದೆ 
ಹೂವಿನಾಸೆಗೆ ಮುಳ್ಳು ಕಂಟಿಗೆ ಸಿಲುಕಿ 
ಬಟ್ಟೆ ಹರಿದು, ಮೈ ತರಚಿ, ಗಾಯವಾಗಿದೆ 

ಕನಸುಗಳನೇನೂ ಅವ ಮಾರುತ್ತ ಬರಲಿಲ್ಲ 
ಹತ್ತಿ ಕಿತ್ತು ನೂಲು ನೇಯ್ದವಳು ನಾನೇ 
ದಿಗಂಬರನಾಗಿ ಆಕಾಶದೆತ್ತರ ನಿಂತವಗೆ 
ನಾ ಹೆಣೆದ ಅಂಗಿಯದೇನು ಗೊಡವೆ? 

ಅವನ ಹೆಸರ ಅಂಗಿ ನಾನೇ ತೊಟ್ಟುಕೊಳ್ಳಲೇ? 
ನೊಂದ ಮೈಯ ಗಾಯಗಳ ಮುಚ್ಚಿಕೊಳ್ಳಲೇ? 
ಕಾಲಿಗೆ ಬಿದ್ದು, ದಾರಿಯರಸಿ, ಹೊರಟುಹೋಗಲೇ? 
ಜಪ ಮಾಡುತ್ತ, ಕಾಲಬಳಿಯೇ, ಕೂತುಬಿಡಲೇ? 

ಬಿರುಗಾಳಿಗೂ, ಭೂಕಂಪಕೂ ಅವ ಅಲುಗಲಾರ 
ನನ್ನ ಭಾವದ ಹೂವು ಅವನಿಗೆಲ್ಲಿ ಕಾಣುವುದು? 
ಅವನದೇ ಪ್ರೀತಿಯಲಿ ನದಿಯಾಗಿ ಹರಿದುಹೋಗಲೇ? 
ಇಲ್ಲಾ ಅವನದೇ ಹಾದಿಯಲಿ ನಡೆದು ಕಲ್ಲ ಬುದ್ಧನಾಗಲೇ? 

ಭಾಶೇ 

No comments: