ನಾ ಹೆದರುತ್ತೇನೆ
ಗಾಜಿನ ಬಾಗಿಲ ದೂಕುತ್ತಾ
ನೀ ಒಳಬರುವೆಯೆಂಬ
ಒಂದೇ ನಂಬಿಕೆ
ನನ ಕಾಲ ನೆಲಕಂಟಿಸಿ
ನಿಲಿಸಿತ್ತು
ಶಬ್ದಕ್ಕೆ ಹೆದರುತ್ತೇನೆ
ನೋಟಕ್ಕೆ ಹೆದರುತ್ತೇನೆ
ಬೆಳಕಿಗೆ ಹೆದರುತ್ತೇನೆ
ಮಾತಿಗೆ ಹೆದರುತ್ತೇನೆ
ನನ್ನ ಬೆಚ್ಚನೆಯ ಲೋಕದ
ಆಚೆಗೆ ಏನೇನಿದೆಯೋ
ಎಲ್ಲಕ್ಕೂ ಹೆದರುತ್ತೇನೆ
ಇದೇ ಕಡೇ ಬಾರಿ
ನಾನು ಹೊರಬರುವುವದು
ನಿನ್ನ ಕಾಣುವುದು
ಮಾತನಾಡುವುದು
ನಗುವುದು
ಇನ್ನೊಬ್ಬರಿಗೆ ಕೇಳುವಂತೆ
ಗಟ್ಟಿಯಾಗಿ ಉಸಿರಾಡುವುದು
ಒಮ್ಮೆ ಕೋಶವ ಸೇರಿಕೊಂಡರೆ
ಒಳಗೇ ಸರಿಯುತ್ತೇನೆ
ಅಂತರ್ಮುಖಿಯಾಗುತ್ತೇನೆ
ಧೇನಿಸುತ್ತೇನೆ ದಣಿವಿಲ್ಲದಂತೆ
ರೆಕ್ಕೆ ಮೂಡಿ ಬಲಿವತನಕ
ಬಂದರೂ ಬರಬಹುದು ಹೊರಗೆ
ಮತ್ತೆ ಚಿಟ್ಟೆಯಾಗಿ
ಇಲ್ಲವೇ ನನ್ನ ಕೋಶದೊಳಗೆ
ನಾನು ಬುದ್ಧನಾಗಬಹುದು
ಭಾಶೇ
No comments:
Post a Comment