ಸತ್ಯಕ್ಕಿಂತ ನಂಬಿಕೆಗೆ ಆತುಕೊಳ್ಳುತ್ತೇನೆ
ಗಾಜಿನಗೋಲ ಪಾರದರ್ಶಕವೇ!
ನಾ ವಿಶ್ವಕ್ಕೆಲ್ಲಾ ಕಂಡರೇನಂತೆ
ರೆಪ್ಪೆಯ ಹಿಂದಿನ ಅಂಧಕಾರ
ನನ್ನ ಶಾಂತಿ ಉಳಿಸುತ್ತಿದೆ
ನಾ ನಗ್ನವಾಗಿದ್ದರೂ
ಮುಚ್ಚಿದ ಕಣ್ಣುಗಳು
ನನ್ನ ಅಂತರಂಗವ ಮುಚ್ಚಿವೆ
ಒಮ್ಮೆ ದೇವರಾಗುತ್ತೇನೆ
ಮತ್ತೊಮ್ಮೆ ಹುಳು
ದುರಹಂಕಾರದಿಂದ ದೈನಾಸಿವರೆಗೂ
ನನ್ನದೇ ಪ್ರಪಂಚವಾಗುತ್ತದೆ
ಪ್ರಪಂಚದಿ ನಾ ಯಾರೂ ಅಲ್ಲ
ಕಾಲನ ಕಾಲಡಿಯ ಕಸ
ಆತ್ಮಾಭಿಮಾನವ ಒಗ್ಗಿಸಿಕೊಳ್ಳುತ್ತೇನೆ
ಲೋಕದ ಮದಿರೆಗಳ ಕುಡಿದು
ಅರ್ಥವಿಲ್ಲದ ಹೋರಾಟವ ನಡೆಸುತ್ತಲೇ ಇರಲು
ಅನುಭವವಿಲ್ಲ, ಬರೀ ಗಿಳಿಪಾಠ
ರಭಸದಿ ಎಸೆದ ಚೆಂಡಷ್ಟೇ
ಮೇಲಕ್ಕೆ ಪುಟಿಯಬಲ್ಲದು
ಹಡಗನ್ನು ಕಟ್ಟಿ
ಬಂದರಲ್ಲೇ ಕಾಯುತ್ತೇನೆ
ಸುನಾಮಿಯೊಂದೇ ನನ್ನ ಸ್ಥಳಾಂತರಗೊಳಿಸಬಹುದೇನೋ?
ಭಾಶೇ
No comments:
Post a Comment