Monday, June 24, 2024

ಅಕ್ಕಮ್ಮರಿಗೆ

ಸಂತೆಯೊಳಗೇ ಮನೆ ಮಾಡಿದ್ದೇನೆ 
ಶಬ್ದ ಸಂವಹಿಸದ ಗೋಡೆಗಳು 
ಕಿವಿಗೆ ನಾಯ್ಸ ಕ್ಯಾನ್ಸಲಿಂಗ್ ಉಪಕರಣ 
ಗಲಾಟೆಗೆ ಅಂಜದೆ ಬದುಕುತ್ತಿದ್ದೇನೆ 

ಕಾಡಿನಲ್ಲೂ ನನ್ನದೊಂದು ಮನೆಯಿದೆ 
ಮಾನವರಿಂದ ದೂರ, ಪ್ರಾಣಿಗಳ ಹತ್ತಿರ 
ಸುತ್ತ ಬೇಲಿ, ಬೆಂಕಿ, ದೀಪ, ಸೈರನ್ 
ಮೃಗಗಳಿಗೆ ಅಂಜದಲೆ ಬದುಕುತ್ತಿದ್ದೇನೆ 

ಸಮುದ್ರದ ತಟದಲ್ಲೂ ಇದೆ ಮನೆ 
ಗಾಳಿ ತುಂಬಿದ ಬಲೂನುಗಳ ಮೇಲೆ 
ತೇಲಾಡುತ್ತದೆ ಪ್ರವಾಹದಲ್ಲಿ 
ಅಲೆಗಳಿಗೆ ಅಂಜುವ ಮಾತೆಲ್ಲಿ? 

ಮನದೊಳಗಿನ ಸಂತೆಗೆ 
ಆಗಾಗ ತಲೆಯೆತ್ತುವ ಮೃಗಕ್ಕೆ 
ಕೊಚ್ಚಿಕೊಂಡೇ ಹೋಗುವ ಭಾವನಾಪ್ರವಾಹಕ್ಕೆ 
ಅಂಜದಿರಲು ಇನ್ನೂ ಕಲಿಯಲಿಲ್ಲ 

ಭಾಶೇ 

No comments: