Friday, June 28, 2024

ನೇಣು

ವಾರದ ಐದು ದಿನ ದುಡಿತ 
ಉಳಿದೆರೆಡು ದಿನ ಕುಡಿತ 
ಮಲಗುವ ಕೋಣೆ 
ಕೆಲಸದ ಡೆಸ್ಕು  
ಇದಿಷ್ಟೇ ಕಂಡವಳಿಗೆ 
ಅಡುಗೆ ಮನೆಯಲ್ಲಿ 
ಕೊಳೆಯುತ್ತಿದ್ದ ಹೆಣದ 
ಸುಳಿವೇ ಇರಲಿಲ್ಲ 

ನಿಂತೇ ಹೋದ ಮಾತು 
ಮರೆತೇ ಹೋದ ಮುಖ 
ಹೆಸರಿಗೆ ದಂಪತಿ 
ಅವಳು ಸತಿಯಲ್ಲ 
ಅವನಲ್ಲ ಪತಿ 
ಜೊತೆಗಿದ್ದರಷ್ಟೇ 
ಹೊರಗಿನವರಿಗೆ ಹೆದರಿ 
ಒಳಗೆ ಖಾಲಿ ಖಾಲಿ 

ಈ ಸಂಸಾರದಲ್ಲಿ 
ಬಡವಾದ ಪ್ರೀತಿ 
ಊಟವಿಲ್ಲದೆ 
ಉಪಚಾರವಿಲ್ಲದೆ 
ಸೊರಗಿ, ಸಾಕಾಗಿ 
ಆಡುಗೆ ಮನೆಯ
ಸೂರಿನ ಕಂಬಿಗೆ 
ಮದುವೆ ಸೀರೆಯ ಬಿಗಿದು 
ನೇಣು ಹಾಕಿಕೊಂಡಿತ್ತು 

ಹೊಟ್ಟೆ ಹಸಿದ ಒಂದು ವೀಕೆಂಡು 
ಅಡುಗೆ ಕೋಣೆಗೆ ಬಂದು 
ಚೀರಿದಳು 
ನೋಡಿ ಹೆದರಿದ ಅವನು 
ಸತ್ತು ಹೋಗಿತ್ತು 
ಅವರ ಪ್ರೀತಿ 

ಕನ್ನಡಿ ಎದುರು ನಿಂತಂತಾಗಿ 
ಗಾಭರಿಯಾದರು 
ವಿಚ್ಛೇದನವೇ ಸಂಸ್ಕಾರವಾಯ್ತು 
ಮುರಿದು ಹೋಗಿದ್ದ ಸಂಬಂಧ 
ಕಡೆಗೆ 
ಮುಗಿದೂ ಹೋಯ್ತು 

ಭಾಶೇ 

No comments: