ಕೇಳಲು ಕಿವಿಗಳಿಲ್ಲ
ತಬ್ಬಲು ಜನರಿಲ್ಲ
ಅತ್ತರೆ ಒರಸಲೂ ಕೈಗಳಿಲ್ಲ
ಗಂಟಲಲ್ಲಿ ಉಳಿದ ನೆನಪುಗಳು
ಹೊರಬರಲು ಹವಣಿಸಿ
ಹುಳುಗಳಾಗಿ ಮೈಯಿಡೀ ಹರಿದಾಡುವಾಗ
ಬೆಂಕಿಯ ಮಳೆಯೊಂದೇ ಗತಿ
ನನ್ನದೇ ದನಿ, ನನ್ನದೇ ವಾಕ್ಯಗಳು
ತಿರುಗುಮುರುಗಾಗಿ
ಮೆದುಳಲಿ ಕೆಸರೆಬ್ಬಿಸುವಾಗ
ಭಾವನೆಗಳ ಬರ ಬರಲೆಂದು ಬೇಡುತ್ತೇನೆ
ದೇಹವ ದಂಡಿಸಲು ಹಚ್ಚಿ
ಮನದ ಕುದುರೆಗಳ ಲಗಾಮ
ಉಸಿರ ನಿಯಂತ್ರಿಸಿದಂತೆ
ಹಿಡಿಯ ತೊಡಗುತ್ತೇನೆ
ಮಾತುಗಳ ಕಟ್ಟುವುದೇ ನಿಲಿಸುತ್ತೇನೆ
ಮನದ ಅಣೆಕಟ್ಟಿನಲಿ
ತುಂಬಿರುವ ಮಾತಿನ ಪ್ರವಾಹ
ಆವಿಯಾಗಿ ಆರಿಹೋಗಲು ಕಾಯುತ್ತೇನೆ
ಕಟ್ಟಿ ತಯಾರಾದ ಭಾವನೆಗಳ
ನಿಟ್ಟುಸಿರುಗಳಲೇ ಹೊರದಬ್ಬುವ
ಹೊಸ ರೂಪಗಳ ಹುಡುಕಿ
ಮತ್ತೆ ಮೌನಿಯಾಗುತ್ತೇನೆ
ಭಾಶೇ
No comments:
Post a Comment