ಬಾನಾಡಿಯಾಗುವ ಬಯಕೆ
ನನ್ನ ಪೋರನಿಗೆ
ಕಾಳು ಹೆಕ್ಕುವ ಹಕ್ಕಿಯ
ಬೇಡವೆಂದರೂ ಬಿಡದೆ
ಓಡಿ, ಓಡಿ ಹಾರಿಸುತ್ತಾನೆ.
ಹಾರುವ ರೆಕ್ಕೆಗಳ
ಕೆಳಗಿನ ಗಾಳಿ
ತಾನೇ ಆಗುತ್ತಾನೆ.
ಪುಟ್ಟ ಕಾಲ್ಗಳ ದಣಿವು
ಲೆಖ್ಖಕ್ಕೇ ಬಾರದು.
ಮುಲಾಮ ಒತ್ತುವುದು ನಾನು!
ಸಾಕೆಂದು ಹಿಡಿದು
ಒಳಗೆಳೆದೊಯ್ಯುವ
ಸ್ವಾರ್ಥವನು ಹತ್ತಿಕ್ಕುತ್ತೇನೆ.
ಅವನ ಬಾಲ್ಯವೂ
ಹಕ್ಕಿಯಂತೇ ಹಾರಲಿದೆ
ನಲಿಯೋಣ ನಾವಿಬ್ಬರೂ, ಈಗಲೇ
ಅವ ಬಾನಾಡಿಯಾಗಿ ಹಾರಿದಾಗ
ಈ ನೆನಪುಗಳೇ ತಾನೇನೆ
ನನ್ನ ಖಜಾನೆ?
ಸೌಮ್ಯಶ್ರೀ ಗೋಣೀಬೀಡು
No comments:
Post a Comment