Saturday, May 18, 2024

ಕೆಸರಲ್ಲಿ ಆನೆ

ಜಿಗುಟು ಕೆಸರಲ್ಲಿ ಸಿಕ್ಕಿಕೊಂಡಿದೆ, ಆನೆ 
ಎತ್ತಲು ಆನೆಬಲವೇ ಬೇಕು 

ನಿಮ್ಮ ಸವೆದ ಹಗ್ಗ, ಮೊಂಡು ಹಾರೆ 
ಮನುಷ್ಯ ಬಲದಲ್ಲಿ 
ಕಾಪಾಡಲು ಹೊರಡದಿರಿ 

ಕಂಡು ಸಿಕ್ಕಿಕೊಂಡಿತೋ, ಕಾಣದೆಯೋ
ಜೀವ ತೊಂದರೆಯಲ್ಲಿದೆ 
ಹಿಂಡು ಬಹುದೂರದಲ್ಲಿದೆ 

ಅಲ್ಪ ಸ್ವಲ್ಪವೇ ಕದಲಿದಾಗ 
ಒದ್ದಾಡುತ್ತಿದೆಯೆಂದುಕೊಳ್ಳಬೇಡಿ 
ಗಟ್ಟಿ ನೆಲವ ಹುಡುಕುತ್ತಿರಬಹುದು 

ಸುಮ್ಮನಾದರೆ ಹೆದರಿ ಬೆದರಿಸಬೇಡಿ 
ಶಕ್ತಿಯ ಒಗ್ಗೂಡಿಸುತ್ತಿರಬಹುದು 
ಒಮ್ಮೆಲೇ ಮೇಲೆದ್ದುಬರಲು 

ತನ್ನ ಆನೆಭಾರದ ದೇಹವ
ತನ್ನ ಕಾಲುಗಳಲೇ ಹೊತ್ತು 
ಮೇಲೆದ್ದು ಬರಬಹುದು ಫೀನಿಕ್ಸ ಹಕ್ಕಿಯಂತೆ 

ಇಲ್ಲಾ, ಸಿಕ್ಕಿಕೊಂಡ ಕೆಸರಲ್ಲಿ 
ಉರುಳಿ, ಹೊರಳಿ, ನರಳಾಡಿ 
ಜೀವಬಿಡಬಹುದು, ಎಲ್ಲರಂತೆ 

ಭಾಶೇ 

No comments: