Tuesday, May 28, 2024

ಸಾವು

ವೇಗದಿ ಸಾಗುತ್ತಾ ಉರಿವ ಧೂಮಕೇತು 
ನಮಗೆ ಕಾಣುತ್ತೆ 
ನಾವದಕ್ಕೆ ಕಾಣಿಸುತ್ತೇವೆಯೇ? 

ಗುಲಾಬಿ, ಚೀಟಿಗಿಡಗಳಲ್ಲಿ 
ಹೂವು, ಮುಳ್ಳು ಒಟ್ಟಿಗಿರಬಹುದಾದರೆ 
ಬದುಕಲ್ಲಿ ಕಷ್ಟ, ಸುಖಗಳ್ಯಾಕೆ ಇರಬಾರದು? 

ಇಂದು ಚಿತೆಯೊಂದು ಉರಿದೇ ಹೋಯ್ತು 
ಹಗ್ಗವೊಂದು ನೇಣಾಯ್ತು 
ಮನೆಯೊಂದು ಸ್ಮಶಾನವಾಯ್ತು 
ಎಳೆಯ ಮಕ್ಕಳಿಬ್ಬರು, ಅನಾಥರು 

ಹುಟ್ಟುವುದ ನಮ್ಮ ಕೈಲಿಡದ ಭಗವಂತ 
ಸಾವನೇಕೆ ಎಟುಕುವ ದೂರದಲ್ಲಿಟ್ಟ? 

ಹಗ್ಗ, ವಿಷ, ಆಯುಧ, 
ಸಾವೇ ಏಕಾಗಬೇಕು? 
ಪ್ರಾಣ ತೆಗೆಯಲೊಲ್ಲದೆ ಮುಷ್ಕರಿಸಲಿ 

ಸಾವಿಗೊಂದು ಕಾರಣ ಬೇಕಂತೆ 
ಸಾವೊಂದೇ ಸಾವಿಗೆ ಕಾರಣವ್ಯಾಕಾಗಬಾರದು? 
ಬೇರೆಲ್ಲವೂ ನಿರಪಾಯಕಾರಿಯಾಗ್ಯಾಕಿರಬಾರದು? 

ಭಾಶೇ

No comments: