Monday, May 20, 2024

ರಾವಣನಾಗು

ಏನಾದರೂ ಆಗಲೇಬೇಕೆಂದಿದ್ದರೆ ರಾವಣನಾಗು 

ಹಠವಾದಿಯಾಗು, ಛಲವಾದಿಯಾಗು, ಕಾರ್ಮಿಕನಾಗು 
ವರ ಸಿಗುವವರೆಗೂ ಧ್ಯಾನ ಮಾಡುವ ಯೋಗಿಯಾಗು 
ಲೋಕದ ಸುಖಗಳ ಬಯಸುವ ಭೋಗಿಯಾಗು 
ಈಶ್ವರನ ಹೆಂಡತಿಯಾದರೇನಂತೆ, ಕಾಮಿಯಾಗು 
ಈಶ್ವರನದೇ ಸ್ತುತಿ ಬರೆವ ಕವಿಯಾಗು 
ಯುದ್ಧ ಭೂಮಿಯಲ್ಲಿ ಹೆದರದ ಯೋಧನಾಗು 
ಸರ್ವಕಲಾ ನಿಪುಣನಾಗು, ರಾವಣನಾಗು 

ಏನಾದರೂ ಆಗಲೇಬೇಕೆಂದಿದ್ದರೆ ರಾವಣನಾಗು 

ಶಾಪಕ್ಕೆ ಹೆದರದ ಸಾಹಸಿಯಾಗು  
ದ್ವೇಷ ಸಾಧಿಸುವ ಶತ್ರುವಾಗು 
ಗುರುವಿನ ವಿಧೇಯ ಶಿಷ್ಯನಾಗು 
ಶ್ರೇಷ್ಠತೆಯ ಬಯಸದವರ ಖಂಡಿಸುವನಾಗು 
ಶ್ರೀಮಂತರ ಎದೆಗೆ ಒದೆವ ವೀರನಾಗು 
ಸಮಾನತೆಯ ಸಾಹುಕಾರನಾಗು 
ಲಂಕೆಯ ರಾಜ, ರಾವಣನಾಗು 

ಏನಾದರೂ ಆಗಲೇಬೇಕೆಂದಿದ್ದರೆ ರಾವಣನಾಗು 

ನಂಬಿದವರ ರಕ್ಷಿಸುವ ಪಾಲಕನಾಗು 
ಜೀವ ಕೊಡುವ ಗೆಳೆಯರ ಮಿತ್ರನಾಗು 
ಸಹೋದರಿಯ ಸುಖ ಬಯಸುವ ಅಣ್ಣನಾಗು 
ಕುಟುಂಬವ ಪೊರೆವ ಹಿರಿಯನಾಗು 
ತಮ್ಮನ ಮೋಸ ಅರಿತರೂ ಧೃತಿಗೆಡದವನಾಗು 
ರಣರಂಗದಿ ಮಡಿವ ಹುತಾತ್ಮನಾಗು 
ಯಾರೂ, ಎಂದೂ, ಮರೆಯಲಾಗದ ರಾಕ್ಷಸನಾಗು 

ಏನಾದರೂ ಆಗಲೇಬೇಕೆಂದಿದ್ದರೆ ರಾವಣನಾಗು 

ಭಾಶೇ

No comments: