Sunday, May 26, 2024

ಹನಿ

ಮೋಡದಲ್ಲಿ ಮಂಜಾಗಿದ್ದೆ 
ಮೋಡ, ಮೋಡ ಸೇರಿ, ಒಗ್ಗೂಡಿ 
ಮಳೆ ಹನಿಯಾದೆ 

ಬಿದ್ದದ್ದು ಹಳೆಯ ಟೈರಿನೊಳಗೆ 

ಏನೆಲ್ಲಾ ಆಸೆಗಳಿದ್ದವು 
ಮರದ ಎಲೆಗಳಿಗೆ ಜಾರಿ 
ಬಿದಿರಗಳುಗಳ ನೋಡಿ 
ಬೆಟ್ಟದ ತುದಿಯಿಂದ ಜಲಪಾತವಾಗಿ 
ಹುಲ್ಲಿನ ಬೇರು ತೊಳೆದು 
ನದಿಯಾಗಿ ಹರಿದು 
ಊರೂರು ತಿರುಗಿ 
ಸಾಗರವ ಸೇರಬೇಕೆಂದು 

ಹಳೆಯ ಟೈರಿನಳಗೆ ಬಂಧಿ 
ಎಲ್ಲಿ ಕಾಣಲಿ ಪ್ರಪಂಚವನ್ನ? 

ಸೊಳ್ಳೆಗಳ ಮೊಟ್ಟೆಗಳಿಗೆ ಮನೆಯಾಗಿ 
ಪಾಚಿಕಟ್ಟಿ, ಕೊಳೆತು ನಾತವಾಗಿ 
ನಾಯಿಯ ಉಚ್ಚೆಯ ಜೊತೆ ಬೆರೆತು 
ನನಮೇಲೇ ನನಗೆ ಜಿಗುಪ್ಸೆಯಾಗಿ 

ಬಿಸಿಲು ಬಿದ್ದು ಆವಿಯಾದರೆ ಮತ್ತೆ 
ಒಂದೇ ಹನಿಯಾಗುವೆನೇ? 

ಭಾಶೇ 

No comments: