Tuesday, May 28, 2024

ಹಾಲು ಉಕ್ಕುವುದೇಕೆ?

ಹಾಲು ಉಕ್ಕುವುದೇಕೆ? 

ಬದಲಾದ ಪರಿಸ್ಥಿತಿಯಲ್ಲಿ 
ಒಂದಾಗಿದ್ದವರು 
ಬೇರೆ ಬೇರೆಯಾದಾಗ 
ತೊರೆದುಕೊಂಡವನ 
ಆಚೆಹಾಕುವ ಆಸೆಯೇ? 

ತಣ್ಣಗಿದ್ದವರನ್ನು 
ಬಿಸಿಮಾಡಿ, ಕುದಿಸಿ 
ಆವಿ ಬರಿಸಿದ 
ಬೆಂಕಿಯನ್ನು 
ನಂದಿಸುವ ಆಸೆಯೇ? 

ಹಾಲೇ ಆಗಿದ್ದರೂ 
ಕೆನೆ, ಆವಿಗಳೂ ಇದೆಯೆಂದು 
ಒಗ್ಗಟ್ಟಲ್ಲಿ ಶಕ್ತಿ 
ಯಾವಾಗಲೂ ಇಲ್ಲವಂದು 
ತೋರುವ ಬಯಕೆಯೇ? 

ಅಥವಾ 

ಯಾವುದೋ ಹಟ್ಟಿಯಲ್ಲಿ 
ಯಾವ ಕರುವ ಪಾಲಿನದೋ
ಈಗ, ಕಾಫಿ, ಟೀ, ಮೊಸರಾಗಬೇಕೆಂಬ 
ಬದಲಾವಣೆಯ ವಿರುದ್ಧ 
ಎತ್ತಿರುವ ಧ್ವನಿಯೇ? 

ಭಾಶೇ 

No comments: