Wednesday, May 29, 2024

ಸ್ವಜಾತಿ ಭಕ್ಷಕ

ಹುಚ್ಚು ಪ್ರೀತಿಯ ಹರಿವು ಎಷ್ಟಿದೆಯೆಂದರೆ 
ನನಗೆ ನೀನು ಸಾಕಾಗುವುದಿಲ್ಲ 
ನಿನಗೆ ನಾನು ಸಾಕಾಗುವುದಿಲ್ಲ 
ಕಚ್ಚಿ ತಿನ್ನುವುದು ಹಿಂಸೆಯಲ್ಲ 
ಹಸಿವು ತಪ್ಪಲ್ಲ 

ಕಗ್ಗತ್ತಲ ಬಿರುಗಾಳಿ ರಾತ್ರಿಗಳಲ್ಲಿ 
ಕೂಗಾಡುತ್ತಾ ಒಂದಾಗತ್ತೇವೆ 
ಊಳಿಡುತ್ತೇವೆ, ಗೀಳಿಡುತ್ತೇವೆ 
ಕಚ್ಚಾಡುತ್ತೇವೆ ಹಸಿದ ನಾಯಿಗಳಂತೆ 
ಎಳೆದು, ದಬ್ಬಿ, ಹಿಂಸಿಸುತ್ತೇವೆ 

ಇದು ಪ್ರೇಮವೋ, ಕಾದಾಟವೋ, 
ಕಂಡವರಿಗೆ ಅರಿವಾಗುವುದಿಲ್ಲ 
ಅವರಿಗೆ 
ಅಂತರಂಗ ನೋಡಲು ಬರುವುದಿಲ್ಲ 

ನಿನ್ನ ಮಾಂಸ ನನಗೆ ಊಟ 
ನನ್ನ ಮಾಂಸ ನಿನಗೆ 
ಕೊಂಚ ಕೊಂಚವಾಗಿ ತಿಂದು ಮುಗಿವ ಒಳಗೆ 
ಕಾದಾಟವೆಲ್ಲಾ ಕರಗಿ
ಪ್ರೀತಿ ಮಾತ್ರ ಉಳಿದಿರುತ್ತದೆ 

ನಿನ್ನ ಗಾಯಗಳ ನಾ ನೆಕ್ಕಿ 
ನನ್ನ ಗಾಯಗಳ ನೀ ನೆಕ್ಕಿ 
ಮುತ್ತಿಟ್ಟು, ಮುದ್ದಾಡಿ 
ತಬ್ಬಿ ಮಲಗಿದರೆ 
ಮಾಂಸ ಖಂಡ ಬೆಳೆವವರೆಗೂ 
ಗಾಯ ಮಾಯುವವರೆಗೂ 
ಸುಖಃ ನಿದ್ರೆ 

ಮತ್ತೆ ಬದುಕು ಹೊರಳಿ 
ಕಾಲು ಕಾಡಿ, ನರಳಿ 
ದೇಶಾಂತರ ಅಲೆದು 
ಹಸಿವಾದಾಗಲೇ ಹುಡುಕುವುದು, ನಿನ್ನ. 

ಭಾಶೇ 

No comments: