ನೆನಪುಮಾಡಿಕೊಳ್ಳುತ್ತೇನೆ.
ಆಸೆಗಳಿಗೆ ರೆಕ್ಕೆ ಮೂಡಿ
ಕನಸುಗಳಾಗಿ
ಬಾಲ್ಕನಿಯಿಂದ ಆಚೆ ಹಾರಿ
ಎಟುಕದಷ್ಟು ದೂರದಲ್ಲಿ ಕೂತಾಗ
ನನ್ನ ನಾಳೆಗಳ ಯೋಜಿಸುತ್ತೇನೆ.
ಇಂದುಗಳು ಚಕ್ರವ್ಯೂಹವಾಗಿ
ಹಗಲು, ರಾತ್ರಿ, ಬೆಳಗು, ಸಂಜೆ
ಏಕರಾಗದಲ್ಲಿ ಸುತ್ತಿದಲ್ಲೇ ಸುತ್ತಿ
ನೆನ್ನೆಗೂ, ಇಂದಿಗೂ ವ್ಯತ್ಯಾಸವೇ ಮರೆತಾಗ
ನಾಳೆಗಳ ಇರುವಿಕೆಯಬಗ್ಗೆ ಚಿಂತಿಸುತ್ತೇನೆ.
ನೊಗಹೊತ್ತಿರುವ ಎತ್ತುಗಳು
ಸಮನಾಗಿ ಎಳೆಯದೆ
ಒಂದರ ಹೆಗಲು ಬಾಗಿ, ನೊಂದು
ಇನ್ನೊಂದಕ್ಕದರ ಅರಿವೂ ಇಲ್ಲದಾಗ
ನಾಳೆಗಳು ಇವೆಯೆಂದು ಬರೆದಿಡುತ್ತೇನೆ.
ನನ್ನ ಇಂದುಗಳು
ನನ್ನ ನೆನ್ನೆಗಳಾಗಿಲ್ಲ
ನನ್ನ ನಾಳೆಗಳೂ ಆಗಿಲ್ಲ
ನಾ ಬಯಸುವ ನನ್ನ ನಾಳೆಗಳು
ಬಹುಷಃ ಬದುಕಲಿವೆ
ಬಹುಷಃ ನನ್ನ ಕೈಗೂಡಲಿವೆ
ಆ ಭರವಸೆ, ಬೇಕಾಗಿದೆ, ಸಾಕಾಗಿದೆ.
ಭಾಶೇ
No comments:
Post a Comment