Thursday, July 18, 2024

ಅನಿವಾರ್ಯ

ವೈಭೋಗಗಳನ್ನೆಲ್ಲಾ ಭೋಗಿಸುವ 
ದೊಡ್ಡವರೆಲ್ಲಾ ಮುಂದೆ 
ಹೊಟ್ಟೆಗೆ ತಿನ್ನಲೂ ಇಲ್ಲದ 
ಹಲವರು ನನ್ನ  ಹಿಂದೆ 
ಮಧ್ಯ ನಿಂತ ನನ್ನ  ಕಣ್ಣಲ್ಲಿ ನೀರಷ್ಟೇ 

ನದಿಯ ಆ ತೀರದಲೂ ಸುಖವಿಲ್ಲ 
ಈ ತೀರದಲೂ ಬದುಕಿಲ್ಲ 
ತೇಲುತ್ತಾ ಸಾಗಲೊಂದು ದೋಣಿ 
ನಮಿಸಲೋ, ಹಳಿಯಲೋ 
ಕೇಳದು ಆಕಾಶವಾಣಿ 

ಕಡಿದ ಕರುಳು ಬಳ್ಳಿಗಳ ಮಣ್ಣಿಗಿಟ್ಟು 
ಇದ್ದಿದ್ದೇ ಸುಳ್ಳೆಂಬಂತೆ ನಡೆದಾಡಿ 
ಹಸಿವ ಹೊಟ್ಟೆಗಳಿಗೆ ಬೆಂಕಿಯಿಟ್ಟು 
ಹನಿ ಸಂತೋಷಕ್ಕೂ ಬಡಿದಾಡಿ 
ಹೆಜ್ಜೆಗಳ ಕೆಳಗೆ ಉಳಿದುಹೋದ ಭಾವಗಳು 

ಆಳದಿಂದೆದ್ದು ಬರುವ ಹೆಸರಿಲ್ಲದ ನೋವುಗಳು 
ಹಳೆಯದಕ್ಕೂ, ಹೊಸತಕ್ಕೂ ಬೆಳೆದ ಸಂಬಂದಗಳು 
ಹೊಟ್ಟೆಯ ಆಚೆಗೆ ಹುಟ್ಟುವ ಹಸಿವುಗಳು 
ತಿಳಿಯಲಾರದ್ದು ಮನುಷ್ಯನ ಮೆದುಳು 
ಅನವರತ ಉರಿವ, ನಲಿವ, ಹರಿವ, ದಿನಗಳು 

ಭಾಶೇ 

No comments: