ಪ್ರತೀ ದಿನವೂ, ಪ್ರತೀ ಕ್ಷಣವೂ
ಹಾಲಾಹಲವೂ, ಅಮೃತವೂ ಬರುವುದೇ
ನಮಗೆ ನಾವೇ ವಿಷಕಂಠರೇ?
ಗಾಜಿನ ಗೋಲದೊಳಗಿರುವ ಬೊಂಬೆಗಳು
ಬರೀ ಬೊಂಬೆಗಳೇ?
ಗಾಜೊಡೆದು ಆಚೆ ಬಂದರೆ ಗೊತ್ತು
ಬೊಂಬೆಗಳಿಗೆ ಜೀವ ಇದೆಯೆಂದು
ಸೂಜಿಯ ಕಣ್ಣು, ಹಗ್ಗದ ತುದಿ
ಹಡಗಿನ ಲಂಗರು, ರೇಷ್ಮೆಯ ಎಳೆ
ಗಾಜುಗಾರನಿಗೂ, ವಜ್ರ ಪರೀಕ್ಷಕನಿಗೂ
ಎತ್ತಣಿಂದೆತ್ತಣ ಸಂಬಂಧವಯ್ಯಾ?
ನಿನ್ನ ಎದೆಯ ನದಿ ಹರಿಯಬಹುದು
ನನ್ನೆದೆಯ ಸಾಗರದಿ ನೀರೇ ಇಲ್ಲ
ನಿನ್ನ ನದಿಗೆ ಅಣೆಕಟ್ಟಿಲ್ಲ
ನನ್ನ ಸಾಗರಕ್ಕೆ ಅದು ಹರಿದು ಬರಲಿಲ್ಲ
ನೀನು ಉತ್ತರಮುಖಿ ಆಯಸ್ಕಾಂತ
ನಾನು ದಾರಿ ಕೇಳದ ಅಂತರ ಪಿಶಾಚಿ
ನಮ್ಮ ದಾರಿಗಳು ಸಂಧಿಸಿದರೂ
ಗುರಿ ಎಂದೂ ಒಂದಾಗಲಾರದು
ಭಾಶೇ
No comments:
Post a Comment