Sunday, July 21, 2024

ಭಿಕ್ಷುಕಿ

ಭಿಕ್ಷೆ ಬೇಡಲು ನಿಂತು ಬೈಗುಳಕ್ಕೆ ಹೆದರಲೇ? 
ಹೋಗಲು ನನ್ನಲ್ಲಿ ಇರುವ ಮಾನವಾದರೂ ಎಷ್ಟು? 
ಹಸಿ ಮಣ್ಣಿನ ಗೊಂಬೆ, ಆಲಿಕಲ್ಲು ಬಿರುಸುಮಳೆ 
ಅಸ್ತಿತ್ವ ಎನ್ನುವುದು ಬರೀ ಭ್ರಮೆ ತಾನೇ? 

ಹಾದಿ ಬದಿ ವಾಂತಿಯ ಸುತ್ತ ನೊಣ 
ಚರಂಡಿಯ ಬದಿ ಬೆಳೆದ ರಾತ್ರಿ ರಾಣಿ 
ಬದುಕು ಹುಟ್ಟುವುದು ಸೌಂದರ್ಯದಲ್ಲಲ್ಲ 
ಕುರೂಪ, ರೂಪಗಳು ನಮ್ಮ ಎಣಿಕೆಯಂತಲೂ ಇಲ್ಲ  

ಹೊಳೆ ಬದಿಯ ಮರಳ ಕಪ್ಪೆ ಗೂಡು 
ಒಂದು ಘಳಿಗೆಗೂ ಉಳಿವುದಿಲ್ಲ 
ಮಕ್ಕಳಾಟಿಕೆಯಷ್ಟೇ 
ಉಳಿದದ್ದು ನಗುವಿನ ನೆನಪುಗಳು ಮಾತ್ರ 

ಹರಿದಿರುವುದು ಬಟ್ಟೆಯೋ, ಮನಸೋ? 
ತೇಪೆ ಹಚ್ಚಿದರೆ ಎಷ್ಟು ದಿನ ಸಾಗೀತು? 
ರಾತ್ರಿಯ ಛಳಿ ಕಳೆದು ಸೂರ್ಯ ಬಂದಾಯ್ತು 
ಇನ್ನೊಂದು ದಿನದ ಇತಿಹಾಸ ಶುರುವಾಯ್ತು 

ಭಿಕ್ಷೆ, ನನ್ನ ನಾನು ಅರಿವ ದಾರಿ 
ಕೊಡುವಾಗಿನ ಅಹಂ ಕಳೆದು, ಬೇಡಿ 
ಮುರಿದು ನನ್ನನೇ, ಮತ್ತೆ ನನ್ನನೇ ಒಗ್ಗೂಡಿಸಿ 
ಬೇಡಲು ನಿಂತರೂ ಸ್ವೀಕರಿಸುವುದು ನನಗೆ ಬೇಕಾದಷ್ಟೇ 

ಭಾಶೇ 

No comments: