Friday, July 26, 2024

ಸಾಕಾಗಿದೆ

ನೀಲಿಯ ಮೇಲಷ್ಟು ಬೆಳ್ಳಿ ಸುರಿದು 
ಕಾಫಿಯ ಬಟ್ಟಲಲ್ಲಿ ಪ್ರತಿಬಿಂಬ ಚೆಲ್ಲಿ 
ಆಯ್ದ ಮಳೆ ಹನಿಗಳ ನೆನೆಯ ಬಿಟ್ಟು 
ತಣ್ಣನೆಯದೊಂದು ಉಸಿರ ಹೊರಹಾಕಿ 
ಕಣ್ಣು ನೆಟ್ಟು ನಿಂತರೆ ಸಾಕಾಗಿದೆ 

ದೂರ ದೂರದ ದೀಪ ಚಿಕ್ಕೆಗಳ ಕಂಡು 
ಅಲ್ಲೇ ಇರಬಹುದೆಂದು ನಂಬಿ 
ಭ್ರಮೆಗಳ ಬೇಲಿಯ ನಿಜವಾಗಿ ಮುರಿದು 
ಎದೆ ತುಂಬುವಂತೆ ಒಂದು ಉಸಿರ ಎಳೆದು 
ನನ್ನ ತನುವ ಮರೆತು ನಿಂತರೆ ಸಾಕಾಗಿದೆ 

ಈಗ ಸೋಕಿ ನಗಿಸಿ ಹೋದ ತಂಗಾಳಿ 
ಆಕಾಶದಿ ಬರೆವ ಬಣ್ಣದ ಚಿತ್ರಗಳು 
ಮಳೆ ನೀರು, ಬಿರಿದ ಹೂವು, ಮರ 
ಎಲ್ಲವೂ ನನ್ನ ಆತ್ಮ ತೃಪ್ತಿಗೆಂದು ನಂಬಿ 
ಮನಸ ಮರೆತು ಗುನುಗಿದರೆ ಸಾಕಾಗಿದೆ 

ಕಣ್ಣು ಕಟ್ಟಿ, ಕಾಲ ಬೀಸಿ ಓಡುವಾಗ 
ಉಸಿರ ಹಿಡಿದು ಮುಳುಗಿ ಈಜುವಾಗ 
ಚಿಂತೆ, ಚಿಂತನೆಗಳಲೇ ಕಳೆದು ಹೋಗಿರುವಾಗ 
ಮುಳುಗುತಿರುವ ಸೂರ್ಯನೊಮ್ಮೆ ನೋಡಿ 
ನಕ್ಕು ಮುಂದುವರಿಯುವಷ್ಟಾದರೆ ಸಾಕಾಗಿದೆ 

ಭಾಶೇ 

No comments: