ಎಲ್ಲಿಗೊಯ್ಯುವುದೋ, ಕಾಣದ ದಾರಿಗಳ ಹುಡುಕಿ
ಸ್ವರ್ಗ ಕಾಣಬಹುದು, ಬೆನ್ನೂ ಮುರಿಯಬಹುದು
ಕೊಡು ಬಿಡುವಾಟದಲಿ ಲೆಖ್ಖವಿಟ್ಟಷ್ಟೂ ಕಷ್ಟ ಜಾಸ್ತಿ
ಹಾರಿದ ಹೊಳೆಗಳ ಹೆಸರ್ಯಾರಿಗೆ ಗೊತ್ತು
ಸುಳಿಗಳಿಂದ ತಪ್ಪಿಕೊಂಡ ಕಥೆ ಹೇಳಬಾರದೇ?
ನಾಳೆಗಳ ದಿಕ್ಕುಗಳಿನ್ನೂ ನಿರ್ಮಿತವಾಗಿಲ್ಲ
ಲಗಾಮು ಜಗ್ಗುವ ಯೋಚನೆಯೇಕೆ?
ಬೋನ್ಸಾಯ್ ಬೋಗುಣಿಗಳಲ್ಲಿ ಮರಗಳಿವೆ
ಒಂದೇ ಮರ ಎಕರೆಗಟ್ಟಲೆ ಹಬ್ಬಿದೆ
ಡಬ್ಬಿಗಳಲ್ಲಿ ಪ್ರಪಂಚ ತುಂಬಿಟ್ಟಾಗಿದೆ
ಪ್ರಪಂಚದ ತುಂಬಾ ಬೇಕಾದಷ್ಟು ಡಬ್ಬಿಗಳಿವೆ
ಲಗಾಮು ಹಿಡಿದೇ ದಾರಿ ಸವೆಸಿದವರಿದ್ದಾರೆ
ಲಗಾಮು ಬಿಟ್ಟು ಗುರುತಿಲ್ಲದೆ ಹೋದವರಿದ್ದಾರೆ
ಗುರಿಯೆಲ್ಲಿ? ತಿಳಿದವರಾರು? ಹೇಳಿದವರಾರು?
ಪ್ರಯಾಣವೇ ಗುರಿಯಾದರೆ ಗಮ್ಯಕ್ಕೆ ಅತ್ತವರಾರು?
ನನ್ನ ಬಾಳ ಕಥೆಗೆ ನಾನೇ ಕಥೆಗಾರಳಾದರೆ
ಕುದುರೆಯ ಲಗಾಮ ಬಿಟ್ಟೇಬಿಡಲೇ?
ಉಳಿದವರ ಬಾಳು, ಅವರವರದಾಯ್ತು
ನನ್ನ ಗುರಿಯ ನಿರ್ಧಾರ ಕುದುರೆಗೆ ಕೊಟ್ಟುಬಿಡಲೇ?
ಭಾಶೇ
No comments:
Post a Comment